ಮಂಗಳೂರು: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ; ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ ಪೋಕ್ಸೊ ನ್ಯಾಯಾಲಯ

ಸಾಂದರ್ಭಿಕ ಚಿತ್ರ
ಮಂಗಳೂರು, ಎ.9: ನಾಲ್ಕು ವರ್ಷದ ಹಿಂದೆ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೊ ನ್ಯಾಯಾಲಯ ಶುಕ್ರವಾರ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕನ್ನೆಹಳ್ಳಿ ನಿವಾಸಿ ಶಶಿ ಯಾನೆ ಶಶಿಕುಮಾರ್ (29) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.
ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ಆಲಂಗಾರು ಎಂಬಲ್ಲಿನ ಫೈನಾನ್ಸ್ನಲ್ಲಿ ಪಿಗ್ಮಿ ಸಂಗ್ರಾಹಕನಾಗಿ ಕೆಲಸ ಮಾಡುತ್ತಿದ್ದ ಈತ ತನ್ನ ದೊಡ್ಡಮ್ಮನ ಮಗಳ ಮನೆಯಲ್ಲಿ ವಾಸ್ತವ್ಯವಿದ್ದ. ಅಲ್ಲಿಗೆ ಸಂಬಂಧಿಕರೇ ಆಗಿರುವ ನೆರೆಮನೆಯ ಅಪ್ರಾಪ್ತ ಬಾಲಕಿ ಟಿವಿ ನೋಡಲು ಬರುತ್ತಿದ್ದಳು. ಆಕೆಯೊಂದಿಗೆ ಸಲುಗೆ ಬೆಳೆಸಿದ್ದ. 2017ರ ನವೆಂಬರ್ನಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆ ಬಳಿಕ ಹಲವು ಬಾರಿ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿತ್ತು.
ಕೆಲವು ಸಮಯದ ಬಳಿಕ ಆಕೆಗೆ ವಿಪರೀತ ಸುಸ್ತು ಕಾಣಿಸಿಕೊಂಡಿದ್ದು, ಲೇಡಿಗೋಷನ್ ಆಸ್ಪತ್ರೆಯ ವೈದ್ಯರಲ್ಲಿಗೆ ಕರೆದೊಯ್ದೆಗ ಆಕೆ ಗರ್ಭಿಣಿಯಾಗಿರುವುದನ್ನು ವೈದ್ಯರು ತಿಳಿಸಿದ್ದಾರೆ. ಬಳಿಕ ಆಕೆಯನ್ನು ವಿಚಾರಿಸಿದಾಗ ಶಶಿಕುಮಾರ್ ಇದಕ್ಕೆ ಕಾರಣ ಎಂದು ಹೇಳಿದ್ದಳು. ಈ ಬಗ್ಗೆ ಆಕೆಯ ತಂದೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 2018ರ ಜೂ.26ರಂದು ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿ ಅಂದಿನ ಇನ್ಸ್ಪೆಕ್ಟರ್ ರಾಮಚಂದ್ರ ನಾಯ್ಕೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸಂತ್ರಸ್ತೆಯ ಮಗು ಹಾಗೂ ಶಶಿಕುಮಾರ್ನ ಡಿಎನ್ಎ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪೂರಕ ವರದಿ ಬಂದಿತ್ತು. 13 ಮಂದಿ ಸಾಕ್ಷಿ ಹೇಳಿದ್ದರು. 25 ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ನ್ಯಾಯಾಧೀಶೆ ಸಾವಿತ್ರಿ ವೆಂಕಟರಮಣ ಅವರು ವಾದ-ಪ್ರತಿವಾದ ಆಲಿಸಿ ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ.
ದಂಡದ ಮೊತ್ತದಲ್ಲಿ 1 ಲಕ್ಷ ರೂ. ಸಂತ್ರಸ್ತೆಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಮೂಲಕ 2 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು.







