ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Photo: Facebook.com/therakshitshetty
ಬೆಂಗಳೂರು, ಎ.9: ನ್ಯಾಯಾಲಯ ಸಮನ್ಸ್ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ನಗರದ 9ನೆ ಎಸಿಎಂಎಂ ಕೋರ್ಟ್ ಶುಕ್ರವಾರ 8ನೆ ಬಾರಿ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೇ ಹಾಡು ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಲಹರಿ ಆಡಿಯೋ ಸಂಸ್ಥೆ ಕಾಪಿ ರೈಟ್ ಕಾಯ್ದೆಯಡಿ ನಟ ರಕ್ಷಿತ್ ಶೆಟ್ಟಿ, ಪರಮ್ವಾ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ 9ನೆ ಎಸಿಎಂಎಂ ಕೋರ್ಟ್ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಆರೋಪಿಗಳು ನ್ಯಾಯಾಲಯಕ್ಕೆ ನಿರಂತರ ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ಇದೀಗ 8ನೆ ಬಾರಿ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದು, ಜಯನಗರ ಠಾಣೆ ಪೊಲೀಸರು ನಟ, ಸಂಗೀತ ನಿರ್ದೇಶಕ ಹಾಗೂ ಪರಮ್ವಾ ಸ್ಟುಡಿಯೋ ಮಾಲಕರನ್ನು ಬಂಧಿಸಿ ಎಪ್ರಿಲ್ 27ರಂದು ಕೋರ್ಟ್ ಎದುರು ಹಾಜರುಪಡಿಸಬೇಕಿದೆ.
ಪ್ರಕರಣವೇನು: 2016 ಡಿ.30 ರಂದು ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಶಾಂತಿ ಕ್ರಾಂತಿ ಚಿತ್ರದ ಹೇ.. ಹೂ ಆರ್ ಯೂ ಹಾಡನ್ನು ಲಹರಿ ಸಂಸ್ಥೆಯಿಂದ ಪೂರ್ವಾನುಮತಿ ಪಡೆಯದೆ ಬಳಸಲಾಗಿದೆ ಎಂದು ಆರೋಪಿಸಿ, ಚಿತ್ರದ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋ ವಿರುದ್ಧ ಲಹರಿ ಸಂಸ್ಥೆ ದೂರು ದಾಖಲಿಸಿದೆ. ಅದರಂತೆ, ಕಾಪಿ ರೈಟ್ಸ್ ಕಾಯ್ದೆಯ ಸೆಕ್ಷನ್ 63 (ಎ) ಹಾಗೂ 63 (ಬಿ) ಅಡಿ ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ನಟ, ಸಂಗೀತ ನಿರ್ದೇಶಕರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿದೆ.







