ಕೆಎಸ್ಸಾರ್ಟಿಸಿ ನೌಕರರ ಮುಷ್ಕರ: ಘಟಕ, ನಿಲ್ದಾಣಗಳಲ್ಲಿ ನಿಷೇಧಾಜ್ಞೆ
ಉಡುಪಿ, ಎ.9: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ, ಜಿಲ್ಲೆಯ ಕರಾರಸಾ ನಿಗಮದ ಕುಂದಾಪುರ ಮತ್ತು ಉಡುಪಿ ತಾಲೂಕಿನ ಘಟಕಗಳ ಆಸ್ತಿಪಾಸ್ತಿ ಮತ್ತು ವಾಹನಗಳಿಗೆ ಹಾನಿ ಉಂಟುಮಾಡಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿರುವ ನಿಗಮದ ಘಟಕ ಹಾಗೂ ಬಸ್ ನಿಲ್ದಾಣಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಉಡುಪಿ ಕೆಎಸ್ಸಾರ್ಟಿಸಿ ಘಟಕ ಪುತ್ತೂರು, ಬಸ್ ನಿಲ್ದಾಣ ಹಾಗೂ ಸಿಟಿ ಬಸ್ ನಿಲ್ದಾಣ ಉಡುಪಿ ಮತ್ತು ಕುಂದಾಪುರ ಕೆಎಸ್ಸಾರ್ಟಿಸಿ ಘಟಕ ವಡೇರಹೋಬಳಿ ಹಾಗೂ ಕುಂದಾಪುರ ಬಸ್ ನಿಲ್ದಾಣ ಇಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಈ ಸ್ಥಳ/ಪ್ರದೇಶಗಳ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ಎ.9ರಿಂದ ಪ್ರತಿಭಟನೆ ಕೊನೆಗೊಳ್ಳುವವರೆಗೆ ಕಲಂ 144ರಂತೆ ನಿಷೇದಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.





