ಬಿಹಾರ:130 ವರ್ಷ ಹಳೆಯ ಖುದಾ ಭಕ್ಷ್ ಲೈಬ್ರರಿಯನ್ನು ಭಾಗಶಃ ನೆಲಸಮಗೊಳಿಸುವ ಪ್ರಸ್ತಾವಕ್ಕೆ ಆಕ್ರೋಶ

ಫೋಟೊ ಕೃಪೆ: twitter.com
ಪಾಟ್ನಾ,ಎ.9: ಶತಮಾನವನ್ನು ಕಂಡಿರುವ ಪಾಟ್ನಾ ನಗರದ ಖ್ಯಾತ ಖುದಾ ಭಕ್ಷ್ ಓರಿಯಂಟಲ್ ಪಬ್ಲಿಕ್ ಲೈಬ್ರರಿಯು ನೆಲಸಮಗೊಳ್ಳುವ ಅಪಾಯವನ್ನು ಎದುರಿಸುತ್ತಿದ್ದು,ಇದು ಸಾಹಿತ್ಯಾಭಿಮಾನಿಗಳಲ್ಲಿ ಆಕ್ರೋಶವನ್ನುಂಟು ಮಾಡಿದೆ.
ಇಲ್ಲಿಯ ಗಂಗಾನದಿ ದಂಡೆಯಲ್ಲಿ 1891ರಲ್ಲಿ ಲೈಬ್ರರಿಯು ಸ್ಥಾಪನೆಗೊಂಡಾಗ ಅದು ಬಿಹಾರದ ಜನಸಾಮಾನ್ಯರು ಪ್ರವೇಶಿಸಬಹುದಾದ ಮೊದಲ ಅಂತಹ ಸ್ಥಳವಾಗಿತ್ತು. 12 ವರ್ಷಗಳ ಬಳಿಕ ಲೈಬ್ರರಿಗೆ ಭೇಟಿ ನೀಡಿದ್ದ ಆಗಿನ ಭಾರತದ ವೈಸ್ರಾಯ್ ಲಾರ್ಡ್ ಕರ್ಝನ್ ಅವರು ಅಲ್ಲಿದ್ದ ಹಸ್ತಪ್ರತಿಗಳ ಸಂಗ್ರಹದಿಂದಾಗಿ ಪ್ರಭಾವಿತರಾಗಿ ಅದರ ಅಭಿವೃದ್ಧಿಗೆ ಹಣಕಾಸನ್ನು ಒದಗಿಸಿದ್ದರು. ಕೃತಜ್ಞತೆಯ ಕುರುಹಾಗಿ ಲೈಬ್ರರಿಯು 1905ರಲ್ಲಿ ಕರ್ಝನ್ ರೀಡಿಂಗ್ ರೂಮ್ ಅನ್ನು ಸ್ಥಾಪಿಸಿತ್ತು. ಆಗಿನಿಂದಲೂ ಇದು ವಿಶ್ವಾದ್ಯಂತದ ವಿದ್ಯಾರ್ಥಿಗಳು,ವಿದ್ವಾಂಸರು ಮತ್ತು ಸಂಶೋಧಕರ ನೆಚ್ಚಿನ ತಾಣವಾಗಿದೆ.
ಆದರೆ ಇಂದು ಪಾಟ್ನಾದ ಸ್ವರೂಪವು ಹೊಸರಸ್ತೆಗಳು ಮತ್ತು ಫ್ಲೈಓವರ್ಗಳಿಂದಾಗಿ ಬದಲಾಗುತ್ತಿದ್ದು,ಮೇಲು ರಸ್ತೆಯೊಂದನ್ನು ನಿರ್ಮಿಸುವ ಬಿಹಾರ ಸೇತುವೆ ನಿರ್ಮಾಣ ನಿಗಮದ ಪ್ರಸ್ತಾವವನ್ನು ನಿತೀಶಕುಮಾರ ನೇತೃತ್ವದ ಸರಕಾರವು ಒಪ್ಪಿಕೊಂಡರೆ ಈ ರೀಡಿಂಗ್ ಹಾಲ್ ಮತ್ತು ಲೈಬ್ರರಿಯ ಇತರ ಕೆಲವು ಭಾಗಗಳು ಅಸ್ತಿತ್ವವನ್ನು ಕಳೆದುಕೊಳ್ಳಲಿವೆ.ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಖುದಾ ಭಕ್ಷ್ ಲೈಬ್ರರಿಯ ಮಾಜಿ ನಿರ್ದೇಶಕ ಹಾಗೂ ಪಾಟ್ನಾ ವಿವಿಯ ಮಾಜಿ ಇತಿಹಾಸದ ಪ್ರೊಫೆಸರ್ ಡಾ.ಇಮ್ತಿಯಾಝ್ ಅಹ್ಮದ್ ಅವರು,ಈ ಪರಂಪರಾ ತಾಣವನ್ನು ನೆಲಸಮಗೊಳಿಸುವ ಪ್ರಸ್ತಾವವು ಸಲ್ಲಿಕೆಯಾಗಿರುವುದು ತನಗೆ ಆಘಾತವನ್ನುಂಟು ಮಾಡಿದೆ ಎಂದರು. ಅಹ್ಮದ್ ಈಗಲೂ ಲೈಬ್ರರಿಯ ಆಡಳಿತ ಮಂಡಳಿಯ ಸದಸ್ಯರಾಗಿದ್ದು,ಬಿಹಾರದ ರಾಜ್ಯಪಾಲರು ಅದರ ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ.
ಕರ್ಝನ್ ರೀಡಿಂಗ್ ಹಾಲ್ನೊಂದಿಗೆ ಲೈಬ್ರರಿಯು ಹೊಂದಿರುವ ಪುಟ್ಟ ಉದ್ಯಾನವನವೂ ಮಾಯವಾಗಲಿದೆ. ಇದರಿಂದ ಜಾಗದ ಅಭಾವ ಸೃಷ್ಟಿಯಾಗಲಿದೆ ಮತ್ತು ಇಲ್ಲಿಗೆ ಬರುವ ವಿವಿಐಪಿಗಳಿಗೆ ಭದ್ರತೆಯನ್ನು ಒದಗಿಸುವುದು ಕಷ್ಟವಾಗಲಿದೆ ಎಂದೂ ಅಹ್ಮದ್ ಹೇಳಿದರು.
ಲೈಬ್ರರಿಯ ಇತಿಹಾಸ
ಸಿವಾನ್ನ ಕುಲೀನ ಜಮೀನ್ದಾರ ಮನೆತನದ ಖಾನ್ ಬಹದೂರ್ ಮೌಲ್ವಿ ಖುದಾ ಭಕ್ಷ್ ಅವರು ಈ ಲೈಬ್ರರಿಯನ್ನು ಸ್ಥಾಪಿಸಿದ್ದರು. ತನ್ನ ತಂದೆಯಿಂದ ದೊರಕಿದ್ದ 1,400 ಹಸ್ತಪ್ರತಿಗಳ ಜೊತೆಗೆ ಉಪಖಂಡದಾದ್ಯಂತ ಪ್ರವಾಸದ ಸಂದರ್ಭಗಳಲ್ಲಿ ತಾನು ಸಂಗ್ರಹಿಸಿದ್ದ ಅಮೂಲ್ಯ ಪುಸ್ತಕಗಳನ್ನು ಲೈಬ್ರರಿಗೆ ನೀಡಿದ್ದರು. ಟ್ರಸ್ಟೊಂದರ ಮೂಲಕ ಜನರಿಗೆ ಲಭ್ಯವಾಗಿಸುವ ಮುನ್ನ ಅವರು ಸುಮಾರು 4,000 ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದರು.
1969ರಲ್ಲಿ ಕೇಂದ್ರ ಸರಕಾರವು ಸಂಸತ್ತಿನಲ್ಲಿ ಅಂಗೀಕೃತ ಮಸೂದೆಯ ಮೂಲಕ ಖುದಾ ಭಕ್ಷ್ ಲೈಬ್ರರಿಯನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಮಾನ್ಯತೆಯನ್ನು ನೀಡಿತ್ತು ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯವು ಅದಕ್ಕೆ ಆರ್ಥಿಕ ನೆರವನ್ನು ಒದಗಿಸಿತ್ತು.
ಇಂದು ಈ ಲೈಬ್ರರಿಯಲ್ಲಿ 21,000ಕ್ಕೂ ಹೆಚ್ಚಿನ ಹಸ್ತಪ್ರತಿಗಳಿದ್ದು,ಹೆಚ್ಚಿನವು ಅರೆಬಿಕ್ ಮತ್ತು ಪರ್ಷಿಯನ್ ಭಾಷೆಗಳಲ್ಲಿವೆ. 100ಕ್ಕೂ ಅಧಿಕ ಸಂಸ್ಕೃತ ಹಸ್ತಪ್ರತಿಗಳೂ ಇಲ್ಲಿವೆ. 2.5 ಲಕ್ಷಕ್ಕೂ ಅಧಿಕ ಪುಸ್ತಕಗಳಿವೆ. ಈ ಪೈಕಿ ಕೆಲವು ಅತ್ಯಂತ ಅಪರೂಪದ ಕೃತಿಗಳಾಗಿದ್ದು,ಪರಂಪರೆ ಕುರಿತು ಯುನೆಸ್ಕೋದ ಮೆಮರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ನಲ್ಲಿ ಉಲ್ಲೇಖಗೊಂಡಿವೆ.