ಇ-ಕಾಮರ್ಸ್ ತಾಣಗಳಲ್ಲಿಯ ಉತ್ಪನ್ನಗಳ ರೇಟಿಂಗ್,ವಿಮರ್ಶೆಗಳಿಗೆ ಮದ್ದರೆಯಲು ಸಂಸದೀಯ ಸಮಿತಿ ಸಜ್ಜು

ಹೊಸದಿಲ್ಲಿ,ಎ.9: ಇ-ಕಾಮರ್ಸ್ ವೇದಿಕೆಗಳು ಇನ್ನು ಮುಂದೆ ತಮ್ಮ ಉತ್ಪನ್ನಗಳು ಇತರರಿಗಿಂತ ಹೆಚ್ಚು ಜನಪ್ರಿಯ ಎಂದು ಬಿಂಬಿಸಲು ನಕಲಿ ವಿಮರ್ಶೆಗಳು ಮತ್ತು ಬೋಗಸ್ ರೇಟಿಂಗ್‌ಗಳನ್ನು ಪೋಸ್ಟ್ ಮಾಡಿದರೆ, ಅಲ್ಗರಿದಮ್‌ಗಳನ್ನು ತಿರುಚಿದರೆ ಅಥವಾ ಗ್ರಾಹಕರನ್ನು ಯಾವುದೇ ರೀತಿಯಿಂದ ಮೋಸಗೊಳಿಸಲು ಪ್ರಯತ್ನಿಸಿದರೆ ಸಂಕಷ್ಟಕ್ಕೆ ಸಿಲುಕಬಹುದು.
ಇ-ಕಾಮರ್ಸ್ ವೇದಿಕೆಗಳಲ್ಲಿ ‘ವಂಚನೆಯ ತಂತ್ರ’ಗಳನ್ನು ತಡೆಯಲು ವ್ಯವಸ್ಥೆಯೊಂದನ್ನು ಸ್ಥಾಪಿಸುವಂತೆ ‘ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಾವಳಿ,2020’ ಕುರಿತು ಸಂಸದೀಯ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಗೆ ಸೂಚಿಸಿದೆ.
ಇಂತಹ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿರುವ ಸಮಿತಿಯು ನಿಯಮಾವಳಿಯಲ್ಲಿನ 6ನೇ ನಿಯಮವನ್ನು ಉಲ್ಲೇಖಿಸಿದೆ. ಈ ನಿಯಮದಡಿ ಯಾವುದೇ ಮಾರಾಟಗಾರ ತನ್ನನ್ನು ಗ್ರಾಹಕನೆಂದು ಸುಳ್ಳಾಗಿ ಬಿಂಬಿಸಿಕೊಳ್ಳುವಂತಿಲ್ಲ ಮತ್ತು ವಿಮರ್ಶೆಯನ್ನು ಪೋಸ್ಟ್ ಮಾಡುವಂತಿಲ್ಲ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಇ-ಕಾಮರ್ಸ್ ತಾಣಗಳಲ್ಲಿ ನಕಲಿ ವಿಮರ್ಶೆಗಳಿಗೆ ಕಡಿವಾಣ ಹಾಕಲು ಮತ್ತು ಇಂತಹ ವಿಷಯಗಳ ಮೇಲೆ ನಿಗಾಯಿರಿಸಲು ಮಹಾನಿರ್ದೇಶಕ (ತನಿಖೆ)ರ ನೇತೃತ್ವದಲ್ಲಿ ಡೊಮೇನ್ ತಜ್ಞರ ತಂಡಗಳನ್ನೊಳಗೊಂಡ ತನಿಖಾ ಘಟಕವೊಂದನ್ನು ಹೊಂದಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.







