"ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯಿಂದ ಮಾನಸಿಕ ಹಿಂಸೆ"
ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಆರೋಪ

ಕುಂದಾಪುರ, ಎ.9: ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರಿಗೆ ನಾನು ಚೆಕ್ ನೀಡದಿದ್ದರೂ, ಬಡ್ಡಿ ಹಣಕ್ಕಾಗಿ ಬೇರೆಯವರಿಗೆ ನೀಡಿರುವ ಚೆಕ್ ಇಟ್ಟುಕೊಂಡು ಶಾಸಕರು ನನ್ನ ವಿರುದ್ಧ ಐದು ಲಕ್ಷ ರೂ. ಚೆಕ್‌ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ಶಾಸಕರು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಗಂಭೀರ ಆರೋಪ ಮಾಡಿದ್ದಾರೆ.
ಕೊಲ್ಲೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ನಾನು ಸುಕುಮಾರ್ ಶೆಟ್ಟಿಗೆ ಚೆಕ್ ನೀಡಿದ್ದರೆ, ಅವರು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಸುಕುಮಾರ್ ಶೆಟ್ಟಿ ಗೆಲುವಿಗೆ ಈ ಹಿಂದೆ ಬೈಂದೂರು ಕ್ಷೇತ್ರಾಧ್ಯಕ್ಷನಾಗಿ ಹಗಲಿರುಳು ಶ್ರಮಿಸಿದ್ದೇನೆ. ಚುನಾವಣೆಯ ಸಂದರ್ಭ ಮಟ್ಕಾ, ಇಸ್ಪೀಟ್ ದಂಧೆ, ಕಮಿಶನ್ ದಂಧೆಗೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದ್ದ ಶಾಸಕರು, ಬಳಿಕ ಅದರ ವಿರುದ್ದ ಯಾವುದೇ ಧ್ವನಿ ಎತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದಕ್ಕೆ ಅವರು, ನನ್ನ ಮೇಲೆ ರೇಗಾಡಿ, ನಾನು ಚುನಾವಣೆಗೆ ಹತ್ತು ಕೋಟಿ ಖರ್ಚು ಮಾಡಿದ್ದೇನೆ. ಆ ಹಣ ನೀನು ಕೊಡುತ್ತೀಯಾ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇದೇ ವಿಚಾರ ಇಟ್ಟುಕೊಂಡು ಶಾಸಕರು ನನ್ನ ಪ್ರಹಾರ ನಡೆಸುತ್ತಲೇ ಬರುತ್ತಿದ್ದಾರೆ ಎಂದು ಅವರು ದೂರಿದರು.
ನನ್ನ ವ್ಯವಹಾರಕ್ಕಾಗಿ ವಕೀಲ ಸದಾನಂದ ಶೆಟ್ಟಿಯಿಂದ 20 ಲಕ್ಷ ರೂ. ಬಡ್ಡಿ ಮೇಲೆ ಸಾಲ ಪಡೆದುಕೊಂಡಿದ್ದೆ. ಆ ಸಂದರ್ಭದಲ್ಲಿ ಅವರು ಐದು ಖಾಲಿ ಚೆಕ್‌ಗಳನ್ನು ಪಡೆದಿದ್ದರು. ಆದರೆ ನಾನು 28ಲಕ್ಷ ಬಡ್ಡಿ ಸಮೇತವಾಗಿ ಒಟ್ಟು 48 ಲಕ್ಷ ರೂ. ಬ್ಯಾಂಕ್ ಮೂಲಕವೇ ಅವರ ಸಾಲ ತೀರಿಸಿದ್ದೇನೆ. ಆದರೆ ಬಳಿಕ ಅವರು ನಾನು ಕೊಟ್ಟ ಚೆಕ್ ವಾಪಾಸು ನೀಡಿಲ್ಲ. ಕುಂದಾಪುರದ ಬೋರ್ಡ್ ಹೈಸ್ಕೂಲ್‌ನ ದೈಹಿಕ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ ಜೊತೆ ಸೇರಿ ಶಾಸಕರು ಖಾಲಿ ಚೆಕ್ ಅನ್ನು ಸದಾನಂದ ಶೆಟ್ಟಿಯವರಿಂದ ಪಡೆದು ನನ್ನ ವಿರುದ್ದ 5 ಲಕ್ಷ ರೂ. ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ. ಅದೇ ರೀತಿ ವಕೀಲ ಸದಾನಂದ ಶೆಟ್ಟಿ ಕೂಡ ನನ್ನ ವಿರುದ್ದ 25 ಲಕ್ಷ ರೂ ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ ಎಂದು ಸದಾನಂದ ಉಪ್ಪಿನಕುದ್ರು ಆರೋಪಿಸಿದ್ದಾರೆ.
ಸುಕುಮಾರ್ ಶೆಟ್ಟಿ ಗೆಲುವಿಗೆ ನಾನು ಖರ್ಚು ಮಾಡಿರುವ 45 ಲಕ್ಷ ರೂ. ನಲ್ಲಿ 10 ಲಕ್ಷ ಮಾತ್ರ ವಾಪಾಸ್ಸು ನೀಡಿದ್ದರು. ಉಳಿದ 35 ಲಕ್ಷ ಬಾಕಿ ಇಟ್ಟು ಇದೀಗ ನನ್ನ ಮೇಲೆಯೇ ಕೇಸ್ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ಮೇಲೆ ಅರೆಸ್ಟ್ ವಾರೆಂಟ್ ಬಂದಿದೆ. ಪಕ್ಷ ಹಾಗೂ ಸುಕುಮಾರ್ ಶೆಟ್ಟಿ ಗೆಲುವಿಗೆ ಶ್ರಮಿಸಿದ್ದ ಪರಿಣಾಮ ನಾನು ಉದ್ಯಮದಲ್ಲಿ ಸಂಪೂರ್ಣ ನಷ್ಟವಾಗಿ ದಿವಾಳಿಯಾಗಿದ್ದೇನೆ. ಆರ್ಥಿಕ ಶಕ್ತಿ ಇಲ್ಲದ ನನಗೆ ಕಾನೂನು ಹೋರಾಟ ಕಷ್ಟ ಸಾಧ್ಯ ಎಂದು ಅವರು ಕಣ್ಣೀರು ಹಾಕಿದರು.
ಈ ಸಂದರ್ಭದಲ್ಲಿ ಸದಾನಂದ ಅವರ ತಾಯಿ ಲೀಲಾವತಿ, ಪತ್ನಿ ರೇಷ್ಮಾ, ಮಕ್ಕಳಾದ ಸಾರಥ್ಯ, ಸಮರ್ಥ, ಶ್ರೀಲಕ್ಷ್ಮೀ ಹಾಜರಿದ್ದರು.
ಶಾಸಕರ ಮನೆ ಎದುರೇ ಸಾಮೂಹಿಕ ಆತ್ಮಹತ್ಯೆ: ರೇಷ್ಮಾ
ಶಾಸಕರ ಕಿರುಕುಳ ಇದೇ ರೀತಿ ಮುಂದುವರಿದರೆ ಅವರ ಮನೆ ಎದುರೇ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಸದಾನಂದ ಉಪ್ಪಿನಕುದ್ರು ಅವರ ಪತ್ನಿ ರೇಷ್ಮಾ ಮಾಧ್ಯಮದ ಮುಂದೆ ಹೇಳಿದ್ದಾರೆ.
ಸುಕುಮಾರ್ ಶೆಟ್ಟಿ ರಾಜಕೀಯವಾಗಿ ನನ್ನ ಪತಿಯನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ರಾಜಕೀಯಕ್ಕೆ ಹೆಚ್ಚು ಸಮಯ ಕೊಟ್ಟ ಕಾರಣ ಅವರ ವ್ಯವಹಾರಕ್ಕೆ ನಷ್ಟವಾಗಿದೆ. ವ್ಯವಹಾರದಲ್ಲಿ ಐದಾರು ಕೋಟಿ ಹಣ ಕಳೆದುಕೊಂಡಿದ್ದೇವೆ. ನನ್ನ ಪತಿ ಚೆಕ್ ಕೊಟ್ಟಿದ್ದಾರೆಂದು ಅವರು ಕೊಲ್ಲೂರಿಗೆ ಬಂದು ಪ್ರಮಾಣ ಮಾಡಲಿ. ಪ್ರಮಾಣ ಮಾಡಿದರೆ ಕಿಡ್ನಿಯಾದರೂ ಮಾರಿ ಅವರ ಹಣ ತೀರಿಸುವೆ ಎಂದು ಹೇಳಿದರು.







