ಉ.ಪ್ರದೇಶ: ಬಿಜೆಪಿ ಮುಖಂಡನ ಕಾರಿಗೆ ಗುಂಡು ಹಾರಿಸಿದ ಪ್ರಕರಣ; 3 ಪೊಲೀಸರ ಅಮಾನತು

ಲಕ್ನೊ, ಎ.9: ಎಪ್ರಿಲ್ 5ರಂದು ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನ ಕಾರಿಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಕಾರ್ಯಪಡೆಯ ಹೆಡ್‌ಕಾನ್‌ಸ್ಟೆಬಲ್ ವಿಕಾಸ್ ಕುಮಾರ್, ಕಾನ್‌ಸ್ಟೆಬಲ್‌ಗಳಾದ ಅಂಕುಶ್ ಕುಮಾರ್ ಮತ್ತು ವಿಕಾಸ್‌ರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಸುಕೀರ್ತಿ ಮಾಧವ್ ಹೇಳಿದ್ದಾರೆ. ಎಪ್ರಿಲ್ 5ರಂದು ರಾತ್ರಿ 8 ಗಂಟೆಗೆ ಕಾರಿಗೆ ಇಂಧನ ತುಂಬಿಸಲು ಕಾಂಧ್ಲಾ ಪ್ರದೇಶದ ಪೆಟ್ರೋಲ್ ಬಂಕ್‌ಗೆ ತೆರಳಿದ್ದ ಸಂದರ್ಭ ಮೂವರು ವ್ಯಕ್ತಿಗಳು, ಬಹುಷ ಪೊಲೀಸರು, ಕಾರನ್ನು ಸುತ್ತುವರಿದು ಗುಂಡು ಹಾರಿಸತೊಡಗಿದರು. ಕಾರಿನಲ್ಲಿದ್ದ ಕುಟುಂಬದ ಸದಸ್ಯ ಮನೀಶ್‌ನ ತಲೆಗೆ ಗುಂಡೇಟು ತಗುಲಿದೆ. ತಾನು ಅಲ್ಲಿಂದ ತೆರಳಿದ ಬಳಿಕ ಮನೆಗೆ ಬಂದು ತನ್ನನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಅಶ್ವಿನಿ ಪನ್ವಾರ್ ಆರೋಪಿಸಿದ್ದರು.
ದಿಲ್ಲಿ-ಸಹರಾನ್‌ಪುರ ರಸ್ತೆಯಲ್ಲಿ ಸಾಗುತ್ತಿದ್ದ ಅಶ್ವಿನಿ ಪನ್ವಾರ್ ಹಾಗೂ ಇತರರಿದ್ದ ಕಾರನ್ನು ಸಮವಸ್ತ್ರ ಧರಿಸಿರದ ಮೂವರು ಪೊಲೀಸರು(ವಿಶೇಷ ಕಾರ್ಯಪಡೆ) ಅಡ್ಡಗಟ್ಟಿರುವುದು ಪೆಟ್ರೋಲ್ ಬಂಕ್‌ನಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತುಗೊಳಿಸಿರುವುದಾಗಿ ಸುಕೀರ್ತಿ ಮಾಧವ್ ಹೇಳಿದ್ದಾರೆ.