ಕೋವಿಡ್-19ರ ಭೀತಿಯೂ ಪ್ರತಿಭಟನೆಗೆ ಭಂಗವನ್ನುಂಟು ಮಾಡುವುದಿಲ್ಲ:ರೈತ ನಾಯಕರು
ಹೊಸದಿಲ್ಲಿ,ಎ.9: ದಿಲ್ಲಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯು ಅಪಾಯದ ಗಂಟೆಯನ್ನು ಮೊಳಗಿಸುತ್ತಿದ್ದರೂ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ವಿಚಲಿತರಾಗಿಲ್ಲ. ಕೊರೋನ ವೈರಸ್ ಭೀತಿಯು ತಮ್ಮ ಪ್ರತಿಭಟನೆಗೆ ಯಾವುದೇ ಭಂಗವನ್ನುಂಟು ಮಾಡುವುದಿಲ್ಲ ಎಂದು ರೈತ ನಾಯಕರು ಘೋಷಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಗೂ ಹೆಚ್ಚು ಸಮಯದಿಂದ ತೀವ್ರ ಚಳಿ,ಮಳೆ ಮತ್ತು ಬಿಸಿಲಿನ ಬೇಗೆಯನ್ನು ಸಹಿಸಿಕೊಂಡಿರುವ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಈ ಸಮಸ್ಯೆಗಳನ್ನು ಎದುರಿಸಲು ರೈತರು ಪ್ರತಿಭಟನಾ ಸ್ಥಳಗಳಲ್ಲಿ ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಚಳಿಗಾಲದಲ್ಲಿ ಬೆಚ್ಚನೆಯ ಉಡುಪುಗಳ ವಿಫುಲ ಸಂಗ್ರಹವನ್ನು ಹೊಂದಿದ್ದ ಅವರು ಮಳೆಗಾಲದಲ್ಲಿ ತಮ್ಮ ಹಾಸಿಗೆಗಳು ಒದ್ದೆಯಾಗದಂತೆ ಅವುಗಳನ್ನು ಎತ್ತರಿಸಿಕೊಂಡಿದ್ದರು. ಈಗ ಬೇಸಿಗೆಯನ್ನು ಎದುರಿಸಲು ಸಜ್ಜಾಗುವ ನಿಟ್ಟಿನಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಆರಂಭಿಸಿರುವ ಅವರು ಏರ್ ಕಂಡಿಷನರ್‌ಗಳು, ಕೂಲರ್‌ಗಳು ಮತ್ತು ಫ್ಯಾನ್‌ಗಳ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಕೋವಿಡ್-19ರ ಎರಡನೇ ಅಲೆಯನ್ನು ಎದುರಿಸುವುದು ತಮಗೇನೂ ಕಷ್ಟವಲ್ಲ,ಪ್ರತಿಭಟನಾ ಸ್ಥಳದಲ್ಲಿ ಕೆಲವು ಪ್ರಾಥಮಿಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ ಅಖಿಲ ಭಾರತ ಕಿಸಾನ್ ಸಭಾದ ಉಪಾಧ್ಯಕ್ಷ ಲಖಬೀರ್ ಸಿಂಗ್ ಅವರು,‘ಮಾಸ್ಕ್ ಧರಿಸುವುದು ಮತ್ತು ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವ ಅಗತ್ಯದ ಬಗ್ಗೆ ನಾವು ಸಿಂಘು ಗಡಿಯಲ್ಲಿ ವೇದಿಕೆಯಿಂದ ಪ್ರಕಟಣೆಗಳನ್ನು ನೀಡುತ್ತಲೇ ಇದ್ದೇವೆ. ಲಸಿಕೆ ಹಾಕಿಸಿಕೊಳ್ಳುವಂತೆಯೂ ನಾವು ರೈತ ಪ್ರತಿಭಟನಾಕಾರರನ್ನು ಉತ್ತೇಜಿಸುತ್ತಿದ್ದೇವೆ ’ಎಂದರು.