ಉಡುಪಿ: ಮುಷ್ಕರದ ಮಧ್ಯೆ ರಸ್ತೆಗಿಳಿದ 9 ಕೆಎಸ್‌ಆರ್‌ಟಿಸಿ ಬಸ್‌ಗಳು

ಉಡುಪಿ, ಎ.9: ಉಡುಪಿ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನೌಕರರ ಮುಷ್ಕರ ಎರಡನೇ ದಿನವೂ ಮುಂದುವರೆದಿದ್ದು, ಇಂದು ಜಿಲ್ಲೆಯಿಂದ ಒಂಭತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಿರುವ ಬಗ್ಗೆ ವರದಿಯಾಗಿದೆ.
ಉಡುಪಿ ಡಿಪೋದಿಂದ ಕಾರ್ಕಳ ಮೂರು, ಬೈಂದೂರು, ಮೈಸೂರು, ಹುಬ್ಬಳ್ಳಿ ತಲಾ ಒಂದು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿವೆ. ಆದರೆ ಈ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಾತ್ರ ತೀರ ಕಡಿಮೆ ಸಂಖ್ಯೆಯಲ್ಲಿದ್ದವು. ಹೊರ ಜಿಲ್ಲೆಯಿಂದ ಉಡುಪಿಗೆ ಬರಬೇಕಾದ ಯಾವುದೇ ಬಸ್‌ಗಳು ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದೇ ರೀತಿ ಕುಂದಾಪುರ ಡಿಪೋದಿಂದ ಬೆಂಗಳೂರು ಹಾಗೂ ಮೈಸೂರಿಗೆ ತಲಾ ಒಂದು ಬಸ್‌ಗಳು ಸಂಚರಿಸಿವೆ. ಇದರಲ್ಲಿ ಮೈಸೂರಿಗೆ ಹೊರಟ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದವು. ಉಳಿದಂತೆ ಯಾವುದೇ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಅದೇ ರೀತಿ ಹೊರ ಜಿಲ್ಲೆಯಿಂದಲೂ ಕುಂದಾಪುರ ಬಸ್ ನಿಲ್ದಾಣಕ್ಕೆ ಯಾವುದೇ ಬಸ್‌ಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಇಂದು ಕೂಡ ಖಾಸಗಿ ಬಸ್‌ಗಳು ಕೂಡ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿ ವಿವಿಧ ಮಾರ್ಗಗಳಲ್ಲಿ ಸಂಚರಿಸಿದವು.







