ಬಿಎಸ್ಸೆನ್ನೆಲ್ 398 ರೂ. ಪ್ರಿಪೇಡ್ ಯೋಜನೆಯ ಅವಧಿ ಜುಲೈ 8ರವರೆಗೆ ವಿಸ್ತರಣೆ

ಹೊಸದಿಲ್ಲಿ, ಎ.9: ಭಾರತ್ ಸಂಚಾರ ನಿಗಮ ನಿಯಮಿತ(ಬಿಎಸ್ಸೆನ್ನೆಲ್) ತನ್ನ ಗ್ರಾಹಕರಿಗೆ ಘೋಷಿಸಿದ 398 ರೂ. ವಿಶೇಷ ದರದ ಅನ್‌ಲಿಮಿಟೆಡ್ ಪ್ರಿಪೇಡ್ ಯೋಜನೆಯನ್ನು ಇನ್ನೂ 90 ದಿನಗಳಿಗೆ ವಿಸ್ತರಿಸಿದೆ ಎಂದು ವರದಿಯಾಗಿದೆ.
ಈ ವರ್ಷದ ಜನವರಿಯಲ್ಲಿ ಜಾರಿಗೆ ಬಂದ ಈ ವಿಶೇಷ ಪ್ರಿಪೇಡ್ ಯೋಜನೆ ಎಪ್ರಿಲ್ 9ಕ್ಕೆ ಅಂತ್ಯವಾಗಲಿತ್ತು. ಆದರೆ ಇನ್ನೂ 90 ದಿನ ವಿಸ್ತರಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲು ನಿರ್ಧರಿಸಲಾಗಿದೆ. ವಿಸ್ತರಿತ ಯೋಜನೆ ಎಪ್ರಿಲ್ 10ರಿಂದ ಆರಂಭವಾಗಿ ಜುಲೈ 8ಕ್ಕೆ ಸಮಾಪ್ತಿಯಾಗಲಿದೆ ಎಂದು ಮೂಲಗಳು ಹೇಳಿವೆ.
ಅನ್‌ಲಿಮಿಟೆಡ್ ಹೈಸ್ಪೀಡ್ ಡೇಟಾ, ಸ್ಥಳೀಯ ಅನ್‌ಲಿಮಿಟೆಡ್ ವಾಯ್ಸ್ ಕಾಲ್ಸ್, ಎಲ್‌ಎಸ್‌ಎ ಸಹಿತ ಎಲ್ಲಾ ಸೌಲಭ್ಯಗಳೂ ಮುಂದುವರಿಯಲಿದೆ. ಅಲ್ಲದೆ 30 ದಿನಗಳ ಮಾನ್ಯತೆ ಇರುವ ದಿನಾ 100 ಎಸ್‌ಎಂಎಸ್ ಉಚಿತದ ಕೊಡುಗೆಯೂ ವಿಸ್ತರಿತ ಯೋಜನೆಯಲ್ಲಿದೆ. ಎಸ್‌ಎಂಎಸ್ ಮತ್ತು ವಾಯ್ಸ್ ಕರೆಗಳ ಸೌಲಭ್ಯವನ್ನು ಪ್ರೀಮಿಯಂ ನಂಬರ್‌ಗಳಿಗೆ, ಐಎನ್ ನಂಬರ್‌ಗಳಿಗೆ ಮತ್ತು ಅಂತರಾಷ್ಟ್ರೀಯ ನಂಬರ್‌ಗಳಿಗೆ ಬಳಸುವಂತಿಲ್ಲ. ಇದಕ್ಕೆ ಗ್ರಾಹಕರು ಅನ್ವಯಿಸುವ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಬಿಎಸ್ಸೆನ್ನೆಲ್ ಮೂಲಗಳು ಹೇಳಿವೆ.