ರಾತ್ರಿ ಕರ್ಪ್ಯೂನಿಂದ ಕಾರ್ಮಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಕಾಸಿಯಾ ಮನವಿ
ಮಂಗಳೂರು, ಎ.9: ವ್ಯಾಪಕವಾಗುತ್ತಿರುವ ಕೊರೋನ ಸೋಂಕನ್ನು ಕಟ್ಟಿಹಾಕುವ ಉದ್ದೇಶದಿಂದ ಬೆಂಗಳೂರು, ಮೈಸೂರು, ಮಂಗಳೂರು ಸಹಿತ ರಾಜ್ಯದ 8 ಕಡೆ ಎ.10ರಿಂದ 20ರವರೆಗೆ ಜಾರಿಗೊಳಿಸಲಾದ ರಾತ್ರಿ ಕರ್ಪ್ಯೂನಿಂದ ಕೈಗಾರಿಕೆಗಳಿಗೆ ಮತ್ತು ಕಾರ್ಮಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಕಾಸಿಯಾದ ಅಧ್ಯಕ್ಷ ಕೆ.ಬಿ.ಅರಸಬ್ಬ ಮನವಿ ಮಾಡಿದ್ದಾರೆ.
ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕರ್ಪ್ಯೂ ಜಾರಿಗೊಳಿಸಿದರೆ ರಾತ್ರಿ ಪಾಳಿಯಲ್ಲ್ಲಿ ಕೆಲಸ ಮಾಡುತ್ತಿರುವವರಿಗೆ ತೊಂದರೆಯಾಗಲಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಅವರವರ ಕೈಗಾರಿಕಾ ಸಂಸ್ಥೆಗಳು ನೀಡುವ ಗುರುತಿನ ಚೀಟಿ ತೊರಿಸಿದರೆ ಯಾವುದೇ ತೊಂದರೆ ಮಾಡಬಾರದು ಎಂದು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಕಳೆದ ವರ್ಷದ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮತ್ತು ಕೈಗಾರಿಕೆಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಈ ಸಂದರ್ಭ ಮತ್ತೆ ಕೈಗಾರಿಕೆಗಳ ಚಟುವಟಿಕೆಗಳ ಮೇಲೆ ಅತಿಯಾದ ನಿಯಂತ್ರಣವು ಇನ್ನಷ್ಟು ತೊಂದರೆ ಉಂಟುಮಾಡುತ್ತದೆ. ಹಾಗಾಗಿ ರಾತ್ರಿ ಕರ್ಫ್ಯೂ ಕಾರ್ಮಿಕರು ಮತ್ತು ಕೈಗಾರಿಕೆಗಳ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.





