ಕೆಎಸ್ಸಾರ್ಟಿಸಿ ಖಾಸಗೀಕರಣ ಹುನ್ನಾರ: ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪ
ಉಡುಪಿ, ಎ.9: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಮುಷ್ಕರವನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಉದ್ದೇಶಪೂರ್ವಕ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಇದರ ಹಿಂದೆ ಸಂಸ್ಥೆಯನ್ನು ಖಾಸಗಿಕರಣಗೊಳಿಸುವ ಕಾರ್ಪೊರೇಟ್ ವಲಯದ ಲಾಬಿಯ ಹಸ್ತಕ್ಷೇಪದ ಸಾಧ್ಯತೆ ಎದ್ದು ಕಾಣುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಪತ್ರಿಕಾ ಹೇಳಿಕೆ ಆರೋಪಿಸಿದ್ದಾರೆ.
ಈಗಾಗಲೇ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ವಲಯದ ಹದ್ದುಬಸ್ತಿಗೆ ತರುವ ಹುನ್ನಾರದ ಕೇಂದ್ರ ಕೃಷಿ ಮಸೂದೆ ವಿರುದ್ಧ ಕಳೆದ ಹಲವು ತಿಂಗಳುಗಳಿಂದ ರೈತ ಹೋರಾಟ ನಡೆಯುತ್ತಿದ್ದು, ಅದೇ ಸ್ವರೂಪದ ಹೋರಾಟ ಇಲ್ಲಿಯೂ ನಡೆಯುತ್ತಿದೆ. ಇದರ ಹಿಂದೆ ವಿರೋಧ ಪಕ್ಷದ ವ್ಯವಸ್ಥಿತ ಪಿತೂರಿ ಅಡಗಿದೆ ಎಂದು ಆಡಳಿತಾರೂಢ ಬಿಜೆಪಿಯ ಕೆಲ ನಾಯಕರು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಮೇಲೆ ವ್ಯರ್ಥ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ಹೋರಾಟ ನಡೆಸುವುದು ಪ್ರಜೆಗಳ ಸಾಂವಿಧಾನಿಕ ಹಕ್ಕು. ಅದನ್ನು ಸಾಂವಿಧಾನಿಕ ರೀತಿಯಲ್ಲಿ ನಿಭಾಯಿಸುವುದು ಸರಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸರಕಾರ ಎಡವಿದೆ. ಈ ಹೋರಾಟವನ್ನು ಎಸ್ಮಾ ಜಾರಿಯ ಬೆದರಿಕೆ ಒಡ್ಡಿ, ಹದ್ದುಬಸ್ತಿಗೆ ತರುವ ನಾಟಕವಾಡುತ್ತಿದೆ ಎಂದಿದ್ದಾರೆ.





