ಕನ್ನಡ ಬಾರದ ಸರಕಾರಿ ನೌಕರರಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ
ಬೆಂಗಳೂರು, ಎ.9: ಕನ್ನಡ ಬಾರದ ಸರಕಾರಿ ನೌಕರರಿಗೆ ಸಾರ್ವಜನಿಕರಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ವತಿಯಿಂದ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯೊಂದನ್ನು ನಡೆಸಲಾಗುತ್ತಿದೆ.
ಕನ್ನಡ ಶಿಕ್ಷಣ ಯೋಜನೆಗೆ ಕರ್ನಾಟಕದಲ್ಲಿರುವ ಎಲ್ಲ ನಗರಸಭೆ, ಕವಿಪ್ರನಿನಿ, ಕೆಎಸ್ಸಾರ್ಟಿಸಿ, ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳು ಮತ್ತಿತರ ಸರಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಸಹ ನೋಂದಾಯಿಸಿಕೊಳ್ಳಬಹುದು.
ಕರ್ನಾಟಕದ ಸರಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವಾಗಿನ ಅವರ ಕಚೇರಿ ಗೈರುಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಕರ್ನಾಟಕ ಸರಕಾರದ ಅಧಿಸೂಚನೆ 13ನೇ ಫೆಬ್ರವರಿ 1989(ಕರ್ನಾಟಕ ರಾಜ್ಯಪತ್ರ, ಭಾಗ-4, 2ಸಿ(1), ಮಾರ್ಚ್ 23, 1989, ಪುಟ 119)ರಲ್ಲಿ ತಿಳಿಸಿರುವಂತೆ ವಿನಾಯಿತಿಯಿದೆ.
ಈ ಯೋಜನೆಯನ್ನು ಈಗ ಸಾರ್ವಜನಿಕರಿಗೂ ವಿಸ್ತರಿಸಲಾಗಿದೆ. ಇವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ವಯೋಮಿತಿ 18 ರಿಂದ 60 ವಯಸ್ಸಿನ ಒಳಗಿರಬೇಕು. ಆಸಕ್ತರು ಭರ್ತಿ ಮಾಡಿದ ಅರ್ಜಿಯ ಜೊತೆಯಲ್ಲಿ 250 ರೂ.ಡಿಮ್ಯಾಂಡ್ ಡ್ರಾಫ್ಟನ್ನು ಕಳುಹಿಸಿಕೊಡಬೇಕು. ನೋಂದಣಿತರಿಗೆ ಇಪ್ಪತ್ತು ಪಾಠಾವಳಿಗಳನ್ನು ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
ಮೂವತ್ತೈದನೆಯ ತಂಡದ ತರಬೇತಿಯು ನ.1, 2021ರಿಂದ ಆರಂಭವಾಗುತ್ತದೆ. ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-570 006, ಇವರಿಗೆ ಐದು ರೂಪಾಯಿಯ ಅಂಚೆಚೀಟಿಯನ್ನು ಹಚ್ಚಿದ ಸ್ವವಿಳಾಸಿತ ಲಕೋಟೆಯನ್ನು ಕಳುಹಿಸಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳು ಪ್ರಭಾರಿ ಅಧಿಕಾರಿಯವರಿಗೆ ಎ.30, 2021 ಒಳಗೆ ತಲುಪಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







