ಬಿಜೆಪಿ-ತೃಣಮೂಲ ಕಾರ್ಯಕರ್ತರ ಘರ್ಷಣೆ: ಗುಂಡೇಟಿಗೆ ನಾಲ್ವರು ಬಲಿ
ಸಾಂದರ್ಭಿಕ ಚಿತ್ರ
ಕೋಲ್ಕತಾ, ಎ.10: ಶನಿವಾರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನ ನಡೆದಿದ್ದು ಈ ಸಂದರ್ಭ ಕೂಚ್ಬೆಹಾರ್ ಜಿಲ್ಲೆಯ ಸಿತಾಲ್ಕುಚಿ ಕ್ಷೇತ್ರದ ಮತಗಟ್ಟೆಯೊಂದರ ಎದುರು ಭದ್ರತಾ ಪಡೆ (ಸಿಐಎಸ್ಎಫ್) ಮತ್ತು ಸ್ಥಳೀಯರ ಮಧ್ಯೆ ಘರ್ಷಣೆ ನಡೆದಿದ್ದು , ಸಿಐಎಸ್ಎಫ್ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಮತಗಟ್ಟೆಯಲ್ಲಿ ಮತದಾನವನ್ನು ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ, ಪಠಾಂತುಲಿ ಕ್ಷೇತ್ರದ ಮತಗಟ್ಟೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 18 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ . ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂದು ಬಿಜೆಪಿ ದೂರಿದ್ದರೆ ಸೋಲುವ ಭೀತಿಯಿಂದ ಹತಾಶೆಗೊಂಡು ಬಿಜೆಪಿ ಈ ಕೃತ್ಯ ಎಸಗಿದೆ ಎಂದು ಟಿಎಂಸಿ ಆರೋಪಿಸಿದೆ.
4ನೇ ಹಂತದಲ್ಲಿ 44 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದೆ. ಸಿತಾಲ್ಕುಚಿ ಕ್ಷೇತ್ರದಲ್ಲಿ ಬೆಳಿಗ್ಗೆ 9:30ರ ವೇಳೆಗೆ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಒಬ್ಬ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮತಗಟ್ಟೆಯಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿತವಾಗಿದ್ದ ಕೇಂದ್ರ ಪಡೆಗಳ ಥಳಿತದಿಂದ ಈತ ಪ್ರಜ್ಞೆ ತಪ್ಪಿದ್ದಾನೆ ಎಂದು ಗಾಳಿಸುದ್ಧಿ ಹರಡಿದ್ದು ಅಲ್ಲಿ ಗುಂಪು ಸೇರಿದ ಜನರು ಭದ್ರತಾ ಪಡೆಗಳಿಂದ ಆಯುಧಗಳನ್ನು ಕಿತ್ತುಕೊಳ್ಳಲು ಮುಂದಾದರು. ಗುಂಪಿನ ದಾಳಿಯಿಂದ ತಪ್ಪಿಸಿಕೊಳ್ಳಲು ಭದ್ರತಾ ಪಡೆಯವರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ದೇಬಶಿಷ್ ಧಾರ್ ಸುದ್ದಿಗಾರರಿಗೆ ಹೇಳಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ವಿಶೇಷ ಪೊಲೀಸ್ ವೀಕ್ಷಕರಾಗಿ ನಿಯೋಜಿತರಾಗಿರುವ ವಿವೇಕ್ ದುಬೆಯಿಂದ ಪ್ರಾಥಮಿಕ ವರದಿಯನ್ನು ಚುನಾವಣಾ ಆಯೋಗ ಪಡೆದಿದ್ದು ಇದರಲ್ಲಿ ಕೇಂದ್ರ ಪಡೆಗಳಿಂದ ಗುಂಡಿನ ದಾಳಿ ನಡೆದಿರುವುದನ್ನು ದೃಢಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ಟಿಎಂಸಿ, ‘ಸಿತಾಲ್ಕುಚಿ ಕ್ಷೇತ್ರದಲ್ಲಿ ಬಿಜೆಪಿ ಮತಗಟ್ಟೆಯನ್ನು ಆಕ್ರಮಿಸಲು ಪ್ರಯತ್ನಿಸಿದಾಗ ನಡೆದ ಘರ್ಷಣೆಯಲ್ಲಿ 5 ಜನ ಮೃತಪಟ್ಟಿದ್ದಾರೆ. ನಮಗೆ ದೊರೆತ ಮಾಹಿತಿ ಪ್ರಕಾರ ಮೃತರು ಎಐಟಿಸಿ ಕಾರ್ಯಕರ್ತರು ’ ಎಂದು ದೂರಿದೆ.
ಇದು ಕಾನೂನು ಮತ್ತು ಮಾದರಿ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಯಾಗಿದೆ. ಈ ವಿಷಯದ ಬಗ್ಗೆ ಮೊದಲು ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಹೇಳಿದ್ದಾರೆ. ಪ್ರಾಮಾಣಿಕ ರೀತಿಯಿಂದ ಮತ್ತು ನೇರಯುದ್ಧದಲ್ಲಿ ನಮ್ಮನ್ನು ಸೋಲಿಸಲು ಸಾಧ್ಯವಾಗದಿದ್ದಾಗ ನೀವು ಗುಂಡು ಹಾರಿಸಿ ಕೊಲ್ಲುತ್ತಿದ್ದೀರಿ’ ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಉದ್ದೇಶಿಸಿ ಒ’ಬ್ರಿಯಾನ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಪಠಾಂತುಲಿ ಕ್ಷೇತ್ರದ ಮತಗಟ್ಟೆಯಲ್ಲಿ, ಇದೇ ಪ್ರಥಮ ಬಾರಿಗೆ ಮತದಾನ ಮಾಡಲು ಬಂದಿದ್ದ 18 ವರ್ಷದ ಆನಂದ್ ಬರ್ಮನ್ ಎಂಬಾತ ಹಿಂಸಾಚಾರದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಸರತಿ ಸಾಲಿನಲ್ಲಿ ನಿಂತಿದ್ದ ಸಂದರ್ಭ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ಭುಗಿಲೆದ್ದಿದ್ದು ಗುಂಡೇಟಿನಿಂದ ಆನಂದ್ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.