ಕೇಂದ್ರ ಸರಕಾರ ಕೊರೋನ ಪರಿಸ್ಥಿತಿ ಸರಿಯಾಗಿ ನಿಭಾಯಿಸುತ್ತಿಲ್ಲ: ಸೋನಿಯಾಗಾಂಧಿ
‘ರಫ್ತಿಗೆ ಅವಕಾಶ ನೀಡಿ ಲಸಿಕೆಗಳ ಕೊರತೆ ಸೃಷ್ಟಿಸಲಾಗಿದೆ’
ಹೊಸದಿಲ್ಲಿ: ಕೊರೋನ ವೈರಸ್ ಪ್ರಕರಣಗಳ ಉಲ್ಬಣಕ್ಕೆ ದೇಶವು ಸಾಕ್ಷಿಯಾಗಿರುವಂತೆಯೇ ಕೋವಿಡ್ ಪರಿಸ್ಥಿತಿ ಹಾಗೂ ಸಿದ್ದತೆಯ ಕುರಿತು ಮಾಹಿತಿ ಪಡೆಯಲು ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಸಭೆ ನಡೆಸಿದರು. ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಉಪಸ್ಥಿತರಿದ್ದರು.
ಪರೀಕ್ಷೆ, ಪತ್ತೆ ಹಚ್ಚುವುದು ಹಾಗೂ ಲಸಿಕೆ ಹಾಕುವುದು ಆದ್ಯತೆಯಾಗಿರಬೇಕು.ಕಾಂಗ್ರೆಸ್ ಇರಲಿ, ಬೇರೆ ಯಾವುದೇ ಪಕ್ಷದ ಆಡಳಿತವಿರುವ ರಾಜ್ಯಗಳು ನಿಜವಾದ ಸಂಖ್ಯೆಯ ಸೋಂಕುಗಳು ಹಾಗೂ ಸಾವುಗಳ ಕುರಿತ ಅಂಕಿಅಂಶ ಬಹಿರಂಗಪಡಿಸಬೇಕು. ಇದರಲ್ಲಿ ಪಾರದರ್ಶಕತೆ ಇರಬೇಕು. ನಾವು ಲಸಿಕೆ ನೀಡಿಕೆಯ ಕುರಿತು ಮೊದಲಿಗೆ ಹಾಗೂ ಮುಖ್ಯವಾಗಿ ಗಮನ ಹರಿಸಬೇಕಾಗಿದೆ. ಆ ನಂತರ ಲಸಿಕೆಗಳನ್ನು ಇತರ ದೇಶಗಳಿಗೆ ರಫ್ತು ಮಾಡುವುದು ಅಥವಾ ಉಡುಗೊರೆಯಾಗಿ ನೀಡಬೇಕು. ಜವಾಬ್ದಾರಿಯುತ ನಡವಳಿಕೆಯ ಬಗ್ಗೆ ನಾವು ಹೆಚ್ಚು ಒತ್ತು ನೀಡಬೇಕು. ಎಲ್ಲ ಕಾನೂನುಗಳು ಹಾಗೂ ನಿಯಮಗಳನ್ನು ವಿನಾಯಿತಿ ಇಲ್ಲದೆ ಅನುಸರಿಸಬೇಕು ಎಂದು ಸೋನಿಯಾ ಹೇಳಿದರು.
ಶುಕ್ರವಾರ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ, ಲಸಿಕೆಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಬೇಕು. ದೇಶಿಯ ಲಸಿಕೆಗಳ ಅಗತ್ಯತೆಗಳ ಬಗ್ಗೆ ಗಮನಹರಿಸುವಂತೆ ವಿನಂತಿಸಿದ್ದರು. ರಾಹುಲ್ ಪತ್ರದ ಬಳಿಕ ಸೋನಿಯಾ ಈ ಹೇಳಿಕೆ ನೀಡಿದ್ದಾರೆ.
ಲಸಿಕೆ ನಿರ್ವಹಣೆಗೆ ಕೇಂದ್ರ ಸರಕಾರವನ್ನು ದೂಷಿಸಿದ ಸೋನಿಯಾ, ಮೋದಿ ಸರಕಾರವು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಲಸಿಕೆಯನ್ನು ರಫ್ತುಮಾಡುವ ಮೂಲಕ ಭಾರತದಲ್ಲಿ ಲಸಿಕೆಯ ಕೊರತೆಯನ್ನು ಸೃಷ್ಟಿಸಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶ, ಉತ್ತರಾಖಂಡ, ಛತ್ತೀಸಗಢ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಎದುರಿಸುತ್ತಿವೆ.
ಲಸಿಕೆಗಳ ಲಭ್ಯತೆ, ಔಷಧಗಳು ಹಾಗೂ ವೆಂಟಿಲೇಟರ್ ಗಳು ಸೇರಿದಂತೆ ಕೋವಿಡ್-19 ವಿರುದ್ದ ಹೋರಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೈಗೊಂಡ ಪ್ರಯತ್ನಗಳನ್ನು ಸೋನಿಯಾ ಗಾಂಧಿ ಪರಿಶೀಲಿಸಿದರು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.