ಕೋವಿಡ್-19 ನಿಂದಾಗಿ ಹಿರಿಯ ನಟ ಸತೀಶ್ ಕೌಲ್ ನಿಧನ

photo:TWITTER
ಹೊಸದಿಲ್ಲಿ: ಬಿ.ಆರ್.ಚೋಪ್ರಾ ನಿರ್ಮಾಣದ ‘ಮಹಾಭಾರತ’ ಸೇರಿದಂತೆ ಹಲವಾರು ಹಿಂದಿ ಚಲನಚಿತ್ರಗಳು ಹಾಗೂ ಶೋಗಳಲ್ಲಿ ನಟಿಸಿರುವ ಹಿರಿಯ ನಟ ಸತೀಶ್ ಕೌಲ್, ಕೋವಿಡ್ -19 ನಿಂದಾಗಿ ಶನಿವಾರ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಲಾಕ್ಡೌನ್ ಅವಧಿಯಲ್ಲಿ ಭಾರೀ ಸಂಕಷ್ಟದಲ್ಲಿದ್ದ ಅವರು ಚಿತ್ರರಂಗದಿಂದ ಆರ್ಥಿಕ ಸಹಾಯವನ್ನು ಕೋರಿದ್ದರು.
ಸತೀಶ್ ಕೌಲ್ ಲುಧಿಯಾನದಲ್ಲಿ ಕೊನೆಯುಸಿರೆಳೆದರು. ಅವರು ಪ್ರಮುಖವಾಗಿ ಪಂಜಾಬಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಅವರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 85 ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಾಲಿವುಡ್ನ ಕೆಲವು ಚಿತ್ರಗಳಾದ ಕರ್ಮ, ಪ್ರೇಮ್ ಪರ್ಬತ್, ವಾರಂಟ್, ಗುನಹೋ ಕಾ ಫೈಸ್ಲಾ, ಭಕ್ತಿ ಮೆ ಶಕ್ತಿ, ಡ್ಯಾನ್ಸ್ ಡ್ಯಾನ್ಸ್, ರಾಮ್ ಲಖನ್ ಹಾಗೂ ಪ್ಯಾರ್ ತೋ ಹೊನಾ ಹಿ ಥಾ ಚಿತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದರು.
2019 ರಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ನಟನಿಗೆ 5 ಲಕ್ಷ ರೂ. ನೆರವು ನೀಡಿದ್ದರು.