ಮ್ಯಾನ್ಮಾರನ್ನು ಹಾರಾಟ-ನಿಷೇಧ ವಲಯವೆಂದು ಘೋಷಿಸಿ : ವಿಶ್ವಸಂಸ್ಥೆಗೆ ಮ್ಯಾನ್ಮಾರ್ ರಾಯಭಾರಿ ಮೊರೆ
ವಿಶ್ವಸಂಸ್ಥೆ (ನ್ಯೂಯಾರ್ಕ್), ಎ. 10: ಸೇನಾ ಆಡಳಿತವಿರುವ ಮ್ಯಾನ್ಮಾರನ್ನು ಹಾರಾಟ-ನಿಷೇಧ ವಲಯವಾಗಿ ಘೋಷಿಸಬೇಕು, ಆ ದೇಶಕ್ಕೆ ಶಸ್ತ್ರಾಸ್ತ್ರ ಮಾರಾಟವನ್ನು ನಿಷೇಧಿಸಬೇಕು ಹಾಗೂ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿ ಆರ್ಥಿಕ ದಿಗ್ಬಂಧನ ವಿಧಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಮ್ಯಾನ್ಮಾರ್ ರಾಯಭಾರಿಯಾಗಿರುವ ಕ್ಯಾವ್ ಮೋ ಟುನ್ ಶುಕ್ರವಾರ ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
‘‘ನಿಮ್ಮ ಸಾಮೂಹಿಕ ಮತ್ತು ಪ್ರಬಲ ಕ್ರಮ ತಕ್ಷಣ ಬೇಕಾಗಿದೆ’’ ಎಂದು ಸೇನಾ ಸರಕಾರದ ವಿರುದ್ಧ ಬಂಡಾಯವೆದ್ದಿರುವ ರಾಯಭಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
‘‘ನಮಗೆ ಈಗ ಪ್ರತಿಯೊಂದು ಕ್ಷಣವೂ ಮುಖ್ಯವಾಗಿದೆ... ದಯವಿಟ್ಟು... ದಯವಿಟ್ಟು ಕ್ರಮ ತೆಗೆದುಕೊಳ್ಳಿ’’ ಎಂಬುದಾಗಿ ಅವರು ಭಾವುಕರಾಗಿ ಹೇಳಿದರು.
ಅಂತರ್‌ರಾಷ್ಟ್ರೀಯ ಸಮುದಾಯ, ಅದರಲ್ಲೂ ಮುಖ್ಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈವರೆಗೆ ಯಾವುದೇ ನಿರ್ಣಾಯಕ ಹಾಗೂ ಪ್ರಬಲ ಕ್ರಮ ತೆಗೆದುಕೊಳ್ಳದಿರುವುದಕ್ಕಾಗಿ ಅವರು ವಿಷಾದಿಸಿದರು.
ಸೇನೆಯು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿ ರಕ್ತಪಾತ ನಡೆಸುತ್ತಿದೆ ಎಂದು ಹೇಳಿದ ಅವರು, ಸೈನಿಕರು ಮಕ್ಕಳನ್ನು ಕೊಲ್ಲುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.







