ತೊಕ್ಕೊಟ್ಟು: ಕೊರಗಜ್ಜನ ಕೋಲದ ವೇಳೆ ದಾಂಧಲೆ ಯತ್ನ: ಆರೋಪಿ ಪೊಲೀಸ್ ವಶಕ್ಕೆ

ಉಳ್ಳಾಲ, ಎ.11: ತೊಕ್ಕೊಟ್ಟು ಹಳೆ ಚೆಕ್ ಪೋಸ್ಟ್ ಬಳಿಯ ಕೊರಗಜ್ಜನ ಕಟ್ಟೆಯಲ್ಲಿ ಕೋಲ ನಡೆಯುತ್ತಿದ್ದಾಗ ಬೊಬ್ಬೆ ಹಾಕಿ ದಾಂಧಲೆಗೆ ಯತ್ನಿಸಿದ ಆರೋಪದಲ್ಲಿ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಉಳ್ಳಾಲ ಪ್ಯಾರೀಸ್ ಹೊಟೇಲ್ ಬಳಿಯ ನಿವಾಸಿ ಮಹಮ್ಮದ್ ಹಫೀಝ್ (25) ಆರೋಪಿ. ಈತ ಕಳೆದ ರಾತ್ರಿ ಕೊರಗಜ್ಜನ ಕಟ್ಟೆಯಲ್ಲಿ ಕೋಲ ನಿಲ್ಲಿಸುವಂತೆ ಬೊಬ್ಬಿಟ್ಟಿದ್ದಾನೆ. ಅಲ್ಲದೆ, ಸಾಮೂಹಿಕ ಅನ್ನ ಸಂತರ್ಪಣೆ ನಡೆಯುತ್ತಿದ್ದ ಪ್ರದೇಶದ ರಸ್ತೆ ಬದಿಯಲ್ಲಿ ನಿಂತಿದ್ದ ಪೊಲೀಸ್ ಜೀಪಿಗೆ ಕಲ್ಲೆಸೆದಿದ್ದಾನೆ ಎಂದು ಆರೋಪಿಸಿ ಅಲ್ಲಿ ನೆರೆದಿದ್ದವರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ನಡುವೆ ಆರೋಪಿ ಪೊಲೀಸ್ ಜೀಪಿಗೆ ಕಲ್ಲೆಸೆದಿರುವುದು ಗಮನಕ್ಕೆ ಬಂದಿಲ್ಲ. ಆತ ನಶೆಯಲ್ಲಿದ್ದು, ಅದೇ ಕಾರಣಕ್ಕೆ ಈ ರೀತಿ ವರ್ತಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
Next Story





