ಕೋವಿಡ್ ಪ್ರಕರಣಗಳಲ್ಲಿ ಉಲ್ಬಣ: ರೆಮ್ ಡೆಸಿವಿರ್ ರಫ್ತು ನಿಷೇಧಿಸಿದ ಭಾರತ

ಹೊಸದಿಲ್ಲಿ,ಎ.11: ದೇಶದಲ್ಲಿ ಕೋವಿಡ್-19 ಸ್ಥಿತಿಯಲ್ಲಿ ಸುಧಾರಣೆಯಾಗುವವರೆಗೂ ರೆಮ್‌ಡಿಸಿವಿರ್ ಚುಚ್ಚುಮದ್ದಿನ ರಫ್ತನ್ನು ನಿಷೇಧಿಸಿ ಕೇಂದ್ರ ಸರಕಾರವು ರವಿವಾರ ಆದೇಶವನ್ನು ಹೊರಡಿಸಿದೆ.
ಔಷಧಿಯ ಲಭ್ಯತೆಯ ಅನುಕೂಲಕ್ಕಾಗಿ ತಮ್ಮ ದಾಸ್ತಾನುದಾರರು/ವಿತರಕರ ವಿವರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸುವಂತೆ ರೆಮ್‌ಡಿಸಿವಿರ್‌ನ ಎಲ್ಲ ದೇಶಿಯ ತಯಾರಕರಿಗೆ ಸೂಚಿಸಲಾಗಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ. ದಾಸ್ತಾನನ್ನು ದೃಢೀಕರಿಸುವಂತೆ ಹಾಗೂ ಅಕ್ರಮ ಸಂಗ್ರಹ ಮತ್ತು ಕಾಳಸಂತೆಯನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಔಷಧಿಗಳ ಇನ್ಸ್‌ಪೆಕ್ಟರ್‌ಗಳು ಮತ್ತು ಇತರ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಔಷಧಿಗಳ ಇಲಾಖೆಯು ರೆಮ್‌ಡಿಸಿವಿರ್ ಉತ್ಪಾದನೆಯನ್ನು ಹೆಚ್ಚಿಸಲು ದೇಶಿಯ ತಯಾರಕರೊಂದಿಗೆ ಸಂಪರ್ಕದಲ್ಲಿದೆ ಎಂದು ಸರಕಾರವು ತಿಳಿಸಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಎ.11ಕ್ಕೆ ಇದ್ದಂತೆ 11.08 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಈ ಪ್ರಮಾಣ ಕ್ರಮೇಣ ಏರುತ್ತಿದೆ. ಇದರಿಂದಾಗಿ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್‌ಡೆಸಿವರ್ ಚುಚ್ಚುಮದ್ದಿಗೆ ಬೇಡಿಕೆ ದಿಢೀರ್ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಈ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕದ ಗಿಲಿಯಡ್ ಸೈನ್ಸಸ್‌ನೊಂದಿಗೆ ಸ್ವಯಂಪ್ರೇರಿತ ಪರವಾನಿಗೆ ಒಪ್ಪಂದದಡಿ ಏಳು ಭಾರತೀಯ ಕಂಪನಿಗಳು ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ತಯಾರಿಸುತ್ತಿವೆ. ಇವು ಪ್ರತಿ ತಿಂಗಳು ಒಟ್ಟು ಸುಮಾರು 38.80 ಲಕ್ಷ ಯೂನಿಟ್‌ಗಳ ತಯಾರಿಕೆ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿರುವ ಹೇಳಿಕೆಯು, ಉದ್ದೇಶಿತ ಕ್ರಮಗಳ ಬಗ್ಗೆ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮತ್ತೊಮ್ಮೆ ಮಾಹಿತಿ ನಿಡಬೇಕು ಮತ್ತು ಪಾಲನೆಯ ಮೇಲೆ ನಿಗಾಯಿರಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗಿದೆ ಎಂದಿದೆ.







