ಮಕ್ಕಳ ಹಕ್ಕುಗಳು, ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ: ಡಿವೈಎಸ್ಪಿ ಸುಧಾಕರ ನಾಯಕ್

ಉಡುಪಿ, ಎ.11: ಮಕ್ಕಳ ಹಕ್ಕುಗಳ ಮತ್ತು ಕಾಯ್ದೆಗಳನ್ನು ಇಲಾಖೆ ಪರಿ ಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಠಾಣೆಗೆ ಬರುವ ಮಕ್ಕಳು ಮತ್ತು ಪೋಷಕರೊಂದಿಗೆ ಸೌಜನ್ಯವಾಗಿ ಮಾತಾಡಿಸಿ ಅವರ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಯಾಗಿ ಕೆಲಸ ನಿರ್ವಹಿಸಬೇಕು ಎಂದು ಉಡುಪಿ ಪೊಲೀಸ್ ಉಪಾಧೀಕ್ಷಕ ಸುಧಾಕರ ಸದಾನಂದ ನಾಯಕ್ ಹೇಳಿದ್ದಾರೆ.
ಉಡುಪಿ ನಗರ ಮತ್ತು ಮಹಿಳಾ ಪೊಲೀಸ್ ಠಾಣೆಗಳ ವತಿಯಿಂದ ರವಿವಾರ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸ ಲಾದ ಮಕ್ಕಳ ಹಕ್ಕುಗಳು ಮತ್ತು ಕಾಯ್ದೆಗಳ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಮಾತನಾಡಿ, ಎಲ್ಲಾ ಠಾಣಾ ಸಿಬ್ಬಂದಿ, ಮಕ್ಕಳ ಹಿತದೃಷ್ಟಿ ಅವರ ರಕ್ಷಣೆಗೆ ಒತ್ತು ಕೊಟ್ಟು ಆದ್ಯತೆ ನೀಡಿ ವಿಶೇಷವಾಗಿ ಪೋಕ್ಸೋ ಪ್ರಕರಣಗಳಲ್ಲಿ ವಿಳಂಬ ಮಾಡದೆ ಕೇಸ್ ದಾಖಲಿಸಬೇಕು. ಅಲ್ಲದೆ ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಪುನರ್ವಸತಿ ಮತ್ತು ರಕ್ಷಣೆ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಪೋಕ್ಸೋ ಕಾಯ್ದೆ ಬಗ್ಗೆ ಮಾತನಾಡಿ, 18 ವರ್ಷದೊಳಗಿನ ಮಕ್ಕಳಿಗೆ ಸಂಬಂಧಿಸಿದ ಮಾನಸಿಕ ದೈಹಿಕ ಮತ್ತು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಬಂದಲ್ಲಿ ವಿಳಂಬ ಮಾಡದೆ ಅಂತಹ ಮಕ್ಕಳಿಗೆ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು. ಕಾಯ್ದೆಗಿಂತ ಹೆಚ್ಚಾಗಿ ಮಕ್ಕಳ ಬಗ್ಗೆ ಪೊಲೀಸ್ ಸಿಬ್ಬಂದಿ ಗಳಿಗೆ ಕಾಳಜಿ ಮತ್ತು ಮಕ್ಕಳ ಮೇಲೆ ಪ್ರೀತಿ ಇರಬೇಕು. ಆಗ ಮಾತ್ರ ಕಾಯ್ದೆಯ ಪೂರ್ಣ ಪ್ರಮಾಣದ ಅನುಷ್ಠಾನ ಸಾಧ್ಯ ಎಂದು ತಿಳಿಸಿದರು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆ ಬಗ್ಗೆ ಮಾತನಾಡಿದರು. ಮಕ್ಕಳ ಹಕ್ಕುಗಳು ಮತ್ತು ಕಾಯ್ದೆಗಳ ಬಗ್ಗೆ ನಗರ ಠಾಣೆಯ ಸಹಾಯಕ ಉಪನಿರೀಕ್ಷಕ ಜಯಕರ, ಹೆಡ್ ಕಾನ್ಸ್‌ಸ್ಟೇಬಲ್ ಸುಷ್ಮಾ, ಜ್ಯೋತಿ ಮತ್ತು ಕಾನ್ಸ್ಟೆಬಲ್ ಅರುಣಾ ಮಾತನಾಡಿ ದರು. ನಗರ ಠಾಣೆಯ ಉಪ ನಿರೀಕ್ಷಕರದ ಸಕ್ತಿವೇಲು ಉಪಸ್ಥಿತರಿದ್ದರು.
ನಗರ ಠಾಣೆಯ ಉಪನಿರೀಕ್ಷಕ(ಅಪರಾಧ) ವಾಸಪ್ಪನಾಯ್ಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಗರ ಠಾಣೆಯ ಪ್ರೊಬೇಷನರಿ ಉಪ ನಿರೀಕ್ಷಕ ಅನಿಲ್ ವಂದಿಸಿದರು.







