ದ.ಕ.: ಸಹಜ ಸ್ಥಿತಿಗೆ ಮರಳಿದ ಸರಕಾರಿ ಬಸ್‌ಗಳ ಸಂಚಾರ
ಕಡಿಮೆಯಾಗುತ್ತಿರುವ ಮುಷ್ಕರದ ತೀವ್ರತೆ
ಮಂಗಳೂರು, ಎ.11: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ರಾಜ್ಯದ ಬಹುತೇಕ ಕಡೆ ಮುಂದುವರೆದಿದೆ. ಆದರೆ, ದ.ಕ.ಜಿಲ್ಲೆಯಲ್ಲಿ ರವಿವಾರ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಸುಮಾರು 200ಕ್ಕೂ ಅಧಿಕ ಬಸ್‌ಗಳು ಸಂಚಾರ ನಡೆಸಿದ್ದು, ಸಹಜ ಸ್ಥಿತಿಗೆ ಮರಳಿವೆ. ಅಲ್ಲದೆ ಮುಷ್ಕರದ ತೀವ್ರತೆಯೂ ಕಡಿಮೆಯಾಗುತ್ತಿದೆ.
ಮಂಗಳೂರು ಕೆಎಸ್ಸಾರ್ಟಿಸಿಯ ಎರಡನೇ ವಿಭಾಗದಲ್ಲಿ ಅನುಸೂಚಿಯಂತೆ 64 ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಓಡಾಟ ಆರಂಭ ಮಾಡಿದೆ. ಅದರಲ್ಲೂ ಬೆಂಗಳೂರು, ಮೈಸೂರಿಗೆ ರಾಜಹಂಸ, ಸ್ಲೀಪರ್ ಕೋಚ್ ಬಸ್‌ಗಳು ಸಂಚರಿಸಿದರೆ, ಮಂತ್ರಾಲಯ, ತಿರುಪತಿ, ಹೈದರಾಬಾದ್, ಕುಮಟ, ಕಾರವಾರಕ್ಕೆ ವೋಲ್ವೊ ಬಸ್‌ಗಳು ಕೂಡ ಸಂಚಾರ ಆರಂಭ ಮಾಡುವ ಮೂಲಕ ಪೂರ್ಣ ರೂಪದಲ್ಲಿ ಬಸ್‌ಗಳ ಓಡಾಟ ನಡೆದಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್. ಅರುಣ್ ತಿಳಿಸಿದ್ದಾರೆ.
ಮಂಗಳೂರು ಮೊದಲ ವಿಭಾಗದಿಂದ ಕೊಯಮತ್ತೂರು, ಮಧುರೈ, ಸುಬ್ರಹ್ಮಣ್ಯ, ಬಾಗಲಕೋಟೆ, ಧರ್ಮಸ್ಥಳ, ಬೆಂಗಳೂರು, ಮೈಸೂರು, ಕಾಸರಗೋಡು ಸಹಿತ ಸೇರಿದಂತೆ ನಾನಾ ರೂಟ್‌ಗಳಲ್ಲಿ ಶನಿವಾರ 120 ಬಸ್‌ಗಳು ಸಂಚರಿಸಿದರೆ ರವಿವಾರ 89 ಬಸ್‌ಗಳ ಸೇರ್ಪಡೆ ಯೊಂದಿಗೆ 209 ಬಸ್‌ಗಳು ಸಂಚರಿಸಿವೆ. ಅದಲ್ಲದೆ 10ಕ್ಕೂ ಅಧಿಕ ಖಾಸಗಿ ಬಸ್‌ಗಳು ಬಿಜೈಯಿಂದ ಸಂಚರಿಸಿವೆ. ಮಂಗಳೂರು ವಿಭಾಗದಿಂದ 25 ಮಂದಿಗೆ ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ನಿವೃತ್ತರಿಗೆ ಅವಕಾಶ ನೀಡುವ ವಿಚಾರ ಪ್ರಗತಿಯಲ್ಲಿದೆ ಎಮದು ಅರುಣ್ ತಿಳಿಸಿದ್ದಾರೆ.







