ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಾಕ್ಷ್ಯನಾಶಕ್ಕಾಗಿ ವಾಝೆ ಸಹಾಯಕನನ್ನು ಬಂಧಿಸಿದ ಎನ್‌ಐಎ

ಹೊಸದಿಲ್ಲಿ,ಎ.11: ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಮತ್ತು ಮನ್ಸುಖ್ ಹಿರೇನ್ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ, ಈಗಾಗಲೇ ಬಂಧನದಲ್ಲಿರುವ ಅಮಾನತುಗೊಂಡಿರುವ ಮುಂಬೈ ಪೊಲೀಸ್‌ನ ಅಪರಾಧ ಗುಪ್ತಚರ ಘಟಕ (ಸಿಐಯು)ದ ಎಪಿಐ ಸಚಿನ್ ವಾಝೆಯವರ ಸಹಾಯಕ ಹಾಗೂ ಮಾಜಿ ಸಿಐಯು ಅಧಿಕಾರಿ ರಿಯಾಝ್ ಖಾಝಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ರವಿವಾರ ಬಂಧಿಸಿದೆ. ಖಾಝಿ ಪ್ರಕರಣದಲ್ಲಿಯ ಸಾಕ್ಷಗಳನ್ನು ನಾಶ ಮಾಡಿದ ಆರೋಪವನ್ನೆದುರಿಸುತ್ತಿದ್ದಾರೆ.
ಉಭಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್‌ಐಎದಿಂದ ನಿರಂತರ ವಿಚಾರಣೆಗೊಳಗಾಗಿದ್ದ ಖಾಜಿಯನ್ನು ಮಾರ್ಚ್‌ನಲ್ಲಿ ಸಿಐಯುನಿಂದ ಎತ್ತಂಗಡಿ ಮಾಡಲಾಗಿತ್ತು.
ಖಾಝಿ ವಾಹನದ ನಕಲಿ ನಂಬರ್ ಪ್ಲೇಟ್‌ಗಳು ಮತ್ತು ವಝೆ ವಾಸವಿರುವ ಅಪಾರ್ಟ್‌ಮೆಂಟ್ಸ್‌ನ ಡಿಜಿಟಲ್ ವೀಡಿಯೊ ರೆಕಾರ್ಡರ್ (ಡಿವಿಆರ್) ನಂತಹ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಗಳನ್ನು ನಾಶ ಮಾಡಿದ್ದಾರೆ. ಅವರು ತಾನು ನಕಲಿ ನಂಬರ್‌ಪ್ಲೇಟ್‌ಗಳನ್ನು ಮಾಡಿಸಿದ್ದ ಹಲವಾರು ಗ್ಯಾರೇಜ್‌ಗಳಲ್ಲಿ ಕಾಣಿಸಿಕೊಂಡಿದ್ದರು ಮತ್ತು ಎಲ್ಲ ಗ್ಯಾರೇಜ್‌ಗಳಲ್ಲಿಯ ಡಿವಿಆರ್‌ಗಳನ್ನು ವಶಪಡಿಸಿಕೊಂಡು ಬಳಿಕ ಅವುಗಳನ್ನು ನಾಶಗೊಳಿಸಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಮಹತ್ವದ ಸಾಕ್ಷಗಳನ್ನು ನಾಶಗೊಳಿಸಿದ ಆರೋಪದಲ್ಲಿ ಖಾಝಿಯ ಬಂಧನವನ್ನು ಎನ್‌ಐಎ ದೃಢಪಡಿಸಿದೆ.
ಶುಕ್ರವಾರ ಎನ್‌ಐಎ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಝೆಯ ನಿಕಟವರ್ತಿ ಹಾಗೂ ಬಾರ್ ಮಾಲಿಕ ಮಹೇಶ್ ಶೆಟ್ಟಿಯ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.
ವಝೆಯನ್ನು ಶುಕ್ರವಾರ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು,ಎ.23ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಅಂಬಾನಿಯವರ ನಿವಾಸದ ಬಳಿ ಪತ್ತೆಯಾಗಿದ್ದ ಸ್ಫೋಟಕ ತುಂಬಿದ್ದ ವಾಹನದ ಮಾಲಿಕ ಹಿರೇನ್ ಮಾ.4ರಂದು ನಾಪತ್ತೆಯಾಗಿದ್ದು, ಮರುದಿನ ಠಾಣೆ ಜಿಲ್ಲೆಯ ಕಲ್ವಾದ ಖಾಡಿಯಲ್ಲಿ ಅವರ ಶವ ಪತ್ತೆಯಾಗಿತ್ತು.







