ಪರ್ಕಳ ಪೇಟೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಕಟ್ಟಡ ತೆರವಿಗೆ ಸ್ಥಳೀಯರ ವಿರೋಧ
ಅಧಿಕಾರಿಗಳ ಜೊತೆ ವಾಗ್ವಾದ

ಉಡುಪಿ, ಎ.11: ರಾಷ್ಟ್ರೀಯ ಹೆದ್ದಾರಿ 169ಎ ಪರ್ಕಳ ಪೇಟೆಯ ರಸ್ತೆಯ ವಿಸ್ತರಣೆ ಕಾಮಗಾರಿ ಸಂಬಂಧಿಸಿ ಪರ್ಕಳ ಪೇಟೆಯಲ್ಲಿ ರವಿವಾರ ಕಟ್ಟಡ ತೆರವಿಗೆ ಸ್ಥಳೀಯ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಮಧ್ಯೆ ವಾಗ್ವಾದ ಗಳು ನಡೆದವು. ಈ ಹಿನ್ನೆಲೆಯಲ್ಲಿ ಕಟ್ಟಡ ತೆರವು ಕಾರ್ಯಾಚರಣೆಯನ್ನು ತಾತ್ಕಲಿಕವಾಗಿ ಮುಂದೂಡಲಾಯಿತು.
ಪೇಟೆಯ ರಸ್ತೆಯ ಇಕ್ಕೇಲಗಳಲ್ಲಿರುವ ಹಳೆ ಕಟ್ಟಡವನ್ನು ಜೆಸಿಬಿ ಮೂಲಕ ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಂದಾಗಿತ್ತು. ಮುನ್ಸೂಚನೆ ನೀಡದೆ ಹಾಗೂ ನೋಟೀಸ್ ಜಾರಿ ಮಾಡದೆ ಏಕಾಏಕಿ ಕಟ್ಟಡ ತೆರವುಗೊಳಿಸ ಲಾಗುತ್ತಿದೆ ಎಂದು ಆರೋಪಿಸಿ ವ್ಯಾಪಾರಿಗಳು ಈ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿ ದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣ ವಾಯಿತು. ಸ್ಥಳಕ್ಕೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಆಗಮಿಸಿ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರು. ಸ್ಥಳಿಯರು ಒತ್ತಾಯದಂತೆ ಹೆದ್ದಾರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ನಾಯ್ಕಾ ಅರನ್ನು ಸ್ಥಳಕ್ಕೆ ಕರೆಸಲಾಯಿತು.
ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಮುಖಂಡ ಅಮೃತ್ ಶೆಣೈ, ಸಂತ್ರಸ್ತರ ಜೊತೆ ನಿಂತು, ಕಟ್ಟಡ ತೆರವು ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು. ಸಂತ್ರಸ್ತರಿಗೆ ಪರಿಹಾರ ಹಣ ನೀಡದೆ, ಕಟ್ಟಡ ತೆರವುಗೊಳಿ ಸುತ್ತಿರುವುದು ಸರಿಯಲ್ಲ. ಇದರಿಂದ ವ್ಯಾಪಾರಸ್ಥರು ಭೀತಿಗೆ ಒಳಾಗಿದ್ದಾರೆ ಎಂದು ಅವರು ದೂರಿದರು.
ಕಟ್ಟಡ ತೆರವಿನ ಸಂದರ್ಭ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿಲ್ಲ. ತೆರವು ಕಾರ್ಯದ ವೇಳೆ ಬೇಕರಿ ವ್ಯಾಪಾರಿ ಕಡ್ತಲ ರಾಮಚಂದ್ರ ನಾಯಕ್ ಅವರ ಸೊತ್ತುಗಳಿಗೆ ಹಾನಿಯಾಗಿವೆ. ನಗರಸಭೆ ಒಳಚರಂಡಿ ಪೈಪನ್ನು ಒಡೆದು ಹಾಕಲಾಗಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈದಿ ರುವುದಾಗಿ ಈ ವೇಳೆ ಸ್ಥಳೀಯರು ಆರೋಪಿಸಿದರು.
ನಾಗರಾಜ ನಾಯ್ಕ, ಈಗಾಗಲೆ ಸಾಕಷ್ಟು ಸಮಯ ಮೀರಿದ್ದು, ವ್ಯಾಪಾ ರಸ್ಥರು, ಸಂತ್ರಸ್ತರು ಶೀಘ್ರ ಕಟ್ಟಡವನ್ನು ಖಾಲಿ ಮಾಡಿ ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕು. ಈಗಾಗಲೆ ಖಾಲಿಯಾಗಿರುವ ಕಟ್ಟಡವನ್ನು ತೆರವುಗೊಳಿಸುವ ಕೆಲಸ ನಡೆಯಲಿದೆ. ಪರ್ಕಳ ಪೇಟೆಯಲ್ಲಿ ಹಳೆಕಾಲದ 10 ರಿಂದ 14 ಕಟ್ಟಡಗಳು ತೆರವುಗೊಳ್ಳಲಿದೆ ಎಂದು ತಿಳಿಸಿದರು. ಇದರಿಂದ ಸಂತ್ರಸ್ತರು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ರಘುಪತಿ ಭಟ್ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಕಾರ್ಯ ಮಾಡಿದರು.







