ಕೂಚ್‌ಬೆಹಾರ್: ಗೋಲಿಬಾರ್‌ಗೆ ಬಲಿಯಾದ ನಾಲ್ವರು ಗ್ರಾಮಸ್ಥರ ಅಂತ್ಯಸಂಸ್ಕಾರ

ಕೋಲ್ಕತಾ,ಎ.12: ಕೂಚ್ ಬೆಹಾರ್ ಜಿಲ್ಲೆಯ ಜೋರ್‌ಪಟಾಕಿ ಗ್ರಾಮದಲ್ಲಿ ನಿವಾರ ಚುನಾವಣಾ ಹಿಂಸಾಚಾರದ ವೇಳೆ ಭದ್ರತಾಸಿಬ್ಬಂದಿಗಳ ಗುಂಡಿಗೆ ಬಲಿಯಾದ ನಾಲ್ವರು ಗ್ರಾಮಸ್ಥರ ಅಂತ್ಯಸಂಸ್ಕಾರವನ್ನು ರವಿವಾರ ನೆರವೇರಿಸಲಾಯಿತು.
ಅಂತ್ಯಸಂಸ್ಕಾರಕ್ಕೆ ಮುನ್ನ ಮೃತ ಗ್ರಾಮಸ್ಥರ ಮೃತದೇಹಗಳನ್ನು , ಗೋಲಿಬಾರ್ ನಡೆದ ಸ್ಥಳವಾದ ಶಾಲಾ ಆವರಣದ ಸಮೀಪದ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಟಿಎಂಸಿ ಜಿಲ್ಲಾಧ್ಯಕ್ಷ ಪಾರ್ಥ ಪ್ರತಿಮ್ ರಾಯ್ ಅವರ ಮೃತದೇಹಗಳಿಗೆ ಪಕ್ಷದ ಧ್ವಜಗಳನ್ನು ಹೊದಿಸಿ ಶ್ರದ್ದಾಂಜಲಿ ಸಲ್ಲಿಸಿದರು,
ಗೋಲಿಬಾರ್ ಪ್ರತಿಭಟಿಸಿ ಕಪ್ಪುಧ್ವಜಗಳನ್ನು ಧರಿಸಿದ ಗ್ರಾಮಸ್ಥರು ಹಾಗೂ ಬಂಧುಗಳು ಮೃತದೇಹಗಳನ್ನು ಹೊತ್ತುಕೊಂಡು ಹಳ್ಳಿಯ ಸುತ್ತಲೂ ಶವಮಾತ್ರೆ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಜೋರ್‌ಪಟಾಕಿ ಶಾಲೆಯ ಸಮೀಪದ ಬೂತ್‌ನ ಹೊರಗಡೆ ಸರತಿ ಸಾಲಿನಲ್ಲಿ ನಿಂತಿದ್ದ ಜನರ ಮೇಲೆ ಕೇಂದ್ರೀಯ ಪಡೆಗಳು ಗುಂಡು ಹಾರಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗೋಲಿಬಾರ್‌ಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳುವಂತೆಯೂ ಅವರು ಆಗ್ರಹಿಸಿದ್ದಾರೆ.
ರವಿವಾರ ಬೆಳಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೂರವಾಣಿ ಮೂಲಕ ಮೃತರ ಬಂಧುಗಳ ಜೊತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.