ಶೇ.56ರಷ್ಟು ಭಾರತೀಯರು ಕೋವಿಡ್ ಲಸಿಕೆಯಲ್ಲಿ ಹೆಚ್ಚಿನ ಆಯ್ಕೆಗಳನ್ನು ಬಯಸಿದ್ದಾರೆ: ಸಮೀಕ್ಷೆ

ಹೊಸದಿಲ್ಲಿ,ಎ.11: ಎಪ್ರಿಲ್ ತಿಂಗಳ ಮೊದಲ ಹತ್ತು ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದಾಗ ತಮಗೆ ಅಥವಾ ತಮಗೆ ಗೊತ್ತಿದ್ದವರಿಗೆ ಲಸಿಕೆ ಲಭ್ಯವಾಗಿರಲಿಲ್ಲ ಎಂದು ಶೇ.18ರಷ್ಟು ಭಾರತೀಯರು ಹೇಳಿದ್ದರೆ,ಶೇ.56ರಷ್ಟು ಜನರು ಫೈಜರ್,ಮಾಡೆರ್ನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್‌ನಂತಹ ವಿದೇಶಿ ಲಸಿಕೆಗಳಿಗೆ ಆದ್ಯತೆ ನೀಡಿದ್ದಾರೆ ಮತ್ತು ಜೂನ್ ವೇಳೆಗೆ ಈ ಲಸಿಕೆಗಳು ಭಾರತದಲ್ಲಿ ಲಭ್ಯವಾಗಬೇಕು ಎಂದು ಬಯಸಿದ್ದಾರೆ ಎಂದು ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯು ಹೇಳಿದೆ.
ದೇಶದಲ್ಲಿ ಲಸಿಕೆ ಕೊರತೆಯ ವರದಿಗಳ ನಡುವೆ ಲಸಿಕೆ ನೀಡಿಕೆ ಅಭಿಯಾನದ ಇಣುಕು ನೋಟವನ್ನು ಈ ಸಮೀಕ್ಷೆಯು ನೀಡಿದೆ. ಭಾರತದ 255 ಜಿಲ್ಲೆಗಳಲ್ಲಿಯ 24,000 ಕ್ಕೂ ಅಧಿಕ ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಶೇ.67ರಷ್ಟು ಪುರುಷರು ಮತ್ತು ಶೇ.33ರಷ್ಟು ಮಹಿಳೆಯರು ಸೇರಿದ್ದರು.
ಕಳೆದ ಕೆಲವು ವಾರಗಳಲ್ಲಿ ಲಸಿಕೆಯನ್ನು ಪಡೆದುಕೊಳ್ಳಲು ಹಿಂಜರಿಕೆಯ ಪ್ರವೃತ್ತಿ ಕಡಿಮೆಯಾಗಿದ್ದು,ಇದು ಲಸಿಕೆಯ ಬೇಡಿಕೆ-ಪೂರೈಕೆ ಅಸಮತೋಲನಕ್ಕೆ ಕಾರಣವಾಗಿರಬಹುದು ಎಂದು ಬೆಟ್ಟು ಮಾಡಿರುವ ಸಮೀಕ್ಷಾ ವರದಿಯು,ಭಾರತದಲ್ಲಿ ಕೊರೋನ ಎರಡನೇ ಅಲೆಯು ತೀವ್ರಗೊಳ್ಳುತ್ತಿರುವಂತೆ ಲೋಕಲ್ ಸರ್ಕಲ್ಸ್‌ನ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.77ರಷ್ಟು ಜನರು ಲಸಿಕೆ ಪಡೆಯಲು ಆಸಕ್ತಿಯನ್ನು ತೋರಿಸಿದ್ದಾರೆ. ಭಾರತವು ಲಸಿಕೆ ವಿತರಣೆಯನ್ನು ಆರಂಭಿಸಿದಾಗ ಇಂತಹವರ ಸಂಖ್ಯೆ ಶೇ.38ರಷ್ಟಿತ್ತು. 80 ದಿನಗಳ ಅವಧಿಯಲ್ಲಿ ಲಸಿಕೆ ಪಡೆಯಲು ಹಿಂಜರಿಕೆ ಪ್ರವೃತ್ತಿಯಲ್ಲಿ ತೀವ್ರ ಇಳಿಕೆಯಾಗಿದೆ ಎಂದು ಹೇಳಿದೆ.







