ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಗಾಗಿ ದೇಶಮುಖ್ ರ ಇಬ್ಬರು ಆಪ್ತ ಸಹಾಯಕರಿಗೆ ಸಿಬಿಐ ಸಮನ್ಸ್

ಹೊಸದಿಲ್ಲಿ,ಎ.11: ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ ದೇಶಮುಖ್ ಅವರ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಚಿವರ ಆಪ್ತ ಸಹಾಯಕರಾಗಿದ್ದ ಸಂಜೀವ ಪಲಾಂಡೆ ಮತ್ತು ಕುಂದನ್ ಅವರಿಗೆ ರವಿವಾರ ಸಮನ್ಸ್ ಹೊರಡಿಸಿದೆ.
ಬಾಂಬೆ ಉಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.
ಮುಂಬೈನಲ್ಲಿಯ ಬಾರ್‌ಗಳು ಮತ್ತು ರೆಸ್ಟೋರಂಟ್‌ಗಳಿಂದ ಪ್ರತಿ ತಿಂಗಳು 100 ಕೋ.ರೂ.ಹಫ್ತಾ ವಸೂಲು ಮಾಡುವಂತೆ ದೇಶಮುಖ್ ಅವರು ಕೈಗಾರಿಕೋದ್ಯಮಿ ಮುಕೇಶ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕವಿದ್ದ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆಯನ್ನು ಎದುರಿಸುತ್ತಿರುವ,ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಝೆಗೆ ಸೂಚಿಸಿದ್ದ ಸಂದರ್ಭದಲ್ಲಿ ಪಲಾಂಡೆ ಉಪಸ್ಥಿತರಿದ್ದರು ಎಂದು ಸಿಂಗ್ ಆರೋಪಿಸಿದ್ದರು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದರು.
ಇಂತಹ ಒಂದು ಮಾತುಕತೆಯ ಸಂದರ್ಭದಲ್ಲಿ ಕುಂದನ್ ಉಪಸ್ಥಿತರಿದ್ದರು ಎಂದು ವಝೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆನ್ನಲಾಗಿದೆ.
ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಸಿಬಿಐ ಮಂಗಳವಾರದಿಂದ ದೇಶಮುಖ್ ವಿರುದ್ಧದ ಭ್ರಚ್ಟಾಚಾರ ಆರೋಪಗಳ ಕುರಿತು ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ. ಅದು ಈಗಾಗಲೇ ಪರಮಬೀರ್ ಸಿಂಗ್,ವಝೆ ಮತ್ತು ಮುಂಬೈ ಪೊಲೀಸ್‌ನ ಇತರ ಅಧಿಕಾರಿಗಳನ್ನು ಪ್ರಶ್ನಿಸಿದೆ.







