ಕಾವಲುಗಾರನಾಗಿದ್ದಾತ ಈಗ ಐಐಎಂ ಸಹಾಯಕ ಪ್ರಾಧ್ಯಾಪಕ: ಕಾಸರಗೋಡಿನ ಯುವಕನ ಯಶೋಗಾಥೆ

ರಂಜಿತ್ ರಾಮಚಂದ್ರನ್
ಕಾಸರಗೋಡು: ರಾತ್ರಿಯ ಕಾವಲುಗಾರನಿಂದ ರಾಂಚಿಯ ಐಐಎಂ ಸಹಾಯಕ ಪ್ರಾಧ್ಯಾಪಕನಾಗುವ ತನಕ 28 ವರ್ಷದ ರಂಜಿತ್ ರಾಮಚಂದ್ರನ್ ಅವರ ಜೀವನದ ಯಶೋಗಾಥೆಯು ಪ್ರತಿಕೂಲ ಸಂದರ್ಭಗಳ ವಿರುದ್ಧ ಹೋರಾಡುತ್ತಿರುವವರಿಗೆ ಸ್ಫೂರ್ತಿಯ ಸೆಲೆಯಾಗಿದೆ.
"ಐಐಎಂ ಪ್ರಾಧ್ಯಾಪಕರೊಬ್ಬರು ಇಲ್ಲಿ ಜನಿಸಿದರು" ಎಂದು ಫೇಸ್ಬುಕ್ ಪೋಸ್ಟ್ ಜೊತೆಗೆ ಮಳೆನೀರು ಬೀಳದಂತೆ ತಡೆಯಲು ಟಾರ್ಪಾಲಿನ್ ಶೀಟ್ ನಿಂದ ಮುಚ್ಚಿದ ಶಿಥಿಲವಾದ ಹೆಂಚುಗಳ ಗುಡಿಸಲಿನ ಚಿತ್ರವನ್ನು ರಂಜಿತ್ ಎಪ್ರಿಲ್ 9ರಂದು ಹಂಚಿಕೊಂಡಿದ್ದರು. ರಂಜಿತ್ ಜೀವನಗಾಥೆಯು ವೈರಲ್ ಆಗಿದ್ದು, 37,000 ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ.
ರಂಜಿತ್ ಎಲ್ಲರಿಗೂ ಸ್ಫೂರ್ತಿಯ ಮೂಲವಾಗಿದ್ದಾರೆ ಎಂದು ರಾಮಚಂದ್ರನ್ ಅವರನ್ನು ಅಭಿನಂದಿಸಿದ ಹಣಕಾಸು ಸಚಿವ ಟಿ. ಎಂ. ಥಾಮಸ್ ಐಸಾಕ್ ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ರಾಮಚಂದ್ರನ್ ಅವರು ಕಾಸರಗೋಡಿನ ಪನಾಥೂರಿನಲ್ಲಿ ಬಿಎಸ್ಎನ್ಎಲ್ ದೂರವಾಣಿ ವಿನಿಮಯ ಕೇಂದ್ರದಲ್ಲಿ ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು, ಜೊತೆಗೆ ಜಿಲ್ಲೆಯ ಪಿಯಸ್ ಕಾಲೇಜಿನಿಂದ ಅರ್ಥಶಾಸ್ತ್ರ ಪದವಿ ಪಡೆದರು.
"ನಾನು ಹಗಲಿನ ವೇಳೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದೆ ಹಾಗೂ ರಾತ್ರಿಯಲ್ಲಿ ದೂರವಾಣಿ ವಿನಿಮಯ ಕೇಂದ್ರದಲ್ಲಿ ತಿಂಗಳಿಗೆ 4,000 ರೂ. ಸಂಬಳದಲ್ಲಿ ರಾತ್ರಿ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದ್ದೇನೆ'' ಎಂದು ರಾಮಚಂದ್ರನ್ ಬಹಿರಂಗಪಡಿಸಿದ್ದಾರೆ.
ಕೇರಳದಲ್ಲಿ ಪದವಿ ಪಡೆದ ಅವರು ಮದ್ರಾಸ್ನ ಐಐಟಿಗೆ ಸೇರಿದರು, ಅಲ್ಲಿ ಅವರಿಗೆ ಮಲಯಾಳಂ ಮಾತ್ರ ತಿಳಿದಿದ್ದರಿಂದ ಅಧ್ಯಯನ ಮಾಡಲು ಕಷ್ಟವಾಯಿತು. ನಿರಾಶೆಗೊಂಡ ಅವರು ಪಿಎಚ್ಡಿ ಕಾರ್ಯಕ್ರಮವನ್ನು ತ್ಯಜಿಸಲು ನಿರ್ಧರಿಸಿದರು, ಆದರೆ ಅವರ ಮಾರ್ಗದರ್ಶಿ ಡಾ. ಸುಭಾಷ್ ಅವರು ಹಾಗೆ ಮಾಡದಂತೆ ಮನವೊಲಿಸಿದರು.
"ನಾನು ಹೋರಾಡಲು ಹಾಗೂ ನನ್ನ ಕನಸನ್ನು ನನಸಾಗಿಸಲು ನಿರ್ಧರಿಸಿದೆ" ಎಂದು ಅವರು ಬರೆದಿದ್ದಾರೆ. ರಂಜಿತ್ ಕಳೆದ ವರ್ಷ ಡಾಕ್ಟರೇಟ್ ಗಳಿಸಿದರು. ಕಳೆದ ಎರಡು ತಿಂಗಳಿನಿಂದ ಅವರು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು.
"ಈ ಪೋಸ್ಟ್ ವೈರಲ್ ಆಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಾನು ನನ್ನ ಜೀವನ ಕಥೆಯನ್ನು ಪೋಸ್ಟ್ ಮಾಡಿದ್ದೆ, ಅದು ಇನ್ನೂ ಕೆಲವರಿಗೆ ಸ್ಫೂರ್ತಿ ನೀಡುತ್ತದೆ ಎಂದು ವಿಶ್ವಾಸದಲ್ಲಿದ್ದೇನೆ. ಪ್ರತಿಯೊಬ್ಬರೂ ಒಳ್ಳೆಯ ಕನಸು ಕಾಣಬೇಕು ಮತ್ತು ಅವರ ಕನಸುಗಳಿಗಾಗಿ ಹೋರಾಡಬೇಕೆಂದು ನಾನು ಬಯಸುತ್ತೇನೆ. ಇತರ ಜನರು ಇದರಿಂದ ಪ್ರೇರಿತರಾಗಿ ಯಶಸ್ಸನ್ನು ಕಂಡುಕೊಳ್ಳಬೇಕೆಂದು ನಾನು ಬಯಸುತ್ತೇನೆ’’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ರಂಜಿತ್ ಅವರ ತಂದೆ ಟೈಲರ್ ಹಾಗೂ ತಾಯಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಿನ ಕೂಲಿ ಕಾರ್ಮಿಕರಾಗಿದ್ದಾರೆ.







