ಪೂರ್ವ ಲಡಾಖ್‌ನಲ್ಲಿ ಸ್ಥಿರತೆ ಕಾಪಾಡಲು ಭಾರತ-ಚೀನಾ ಒಪ್ಪಿಗೆ

ಹೊಸದಿಲ್ಲಿ, ಎ.11: ಲಡಾಖ್‌ನಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸುವ ಕ್ರಮದ ಮುಂದುವರಿದ ಭಾಗವಾಗಿ ಉಭಯ ದೇಶಗಳ ಮಧ್ಯೆ ನಡೆದ 11ನೇ ಸುತ್ತಿನ ಮಾತುಕತೆಯಲ್ಲಿ ಪೂರ್ವ ಲಡಾಖ್‌ನಲ್ಲಿ ಅಹಿತಕರ ಘಟನೆ ನಡೆಯದಂತೆ ಸ್ಥಿರತೆಯನ್ನು ಕಾಪಾಡಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ವಿದೇಶ ವ್ಯವಹಾರ ಸಚಿವಾಲಯ ಹೇಳಿದೆ.
ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಇನ್ನುಳಿದ ಪ್ರದೇಶಗಳಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಕುರಿತು ಶುಕ್ರವಾರ ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ ಸಭೆ ಚುಶುಲ್-ಮೋಲ್ಡೊ ಸೇನಾ ನೆಲೆಯಲ್ಲಿ ನಡೆಯಿತು. ಬಾಕಿ ಉಳಿದ ವಿಷಯಗಳನ್ನು ಅಸ್ತಿತ್ವದಲ್ಲಿರುವ ಒಪ್ಪಂದ ಮತ್ತು ಶಿಷ್ಟಾಚಾರದ ಪ್ರಕಾರ ಬಗೆಹರಿಸಿಕೊಳ್ಳುವ ಅಗತ್ಯದ ಬಗ್ಗೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ವಿದೇಶ ವ್ಯವಹಾರ ಸಚಿವಾಲಯದ ಹೇಳಿಕೆ ತಿಳಿಸಿದೆ. ಪಾಂಗ್ಯಾಂಗ್ ತ್ಸೊ ಪ್ರದೇಶದಲ್ಲಿ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇತರ ಘರ್ಷಣೆ ನೆಲೆಗಳಿಂದಲೂ ಸೇನೆ ಹಿಂಪಡೆಯುವ ಬಗ್ಗೆ ಭಾರತ-ಚೀನಾ ಚರ್ಚಿಸಿವೆ. ಇತರ ಪ್ರದೇಶಗಳಿಂದಲೂ ಸೇನೆ ಹಿಂದೆ ಸರಿದರೆ ಈ ಪ್ರದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಮತ್ತು ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಉಭಯ ದೇಶಗಳು ಸಹಮತ ಸೂಚಿಸಿವೆ ಎಂದು ವಿದೇಶ ವ್ಯವಹಾರ ಇಲಾಖೆ ಹೇಳಿದೆ.
ಪರಸ್ಪರರ ನಿಲುವನ್ನು ಗೌರವಿಸುವ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ರೂಪಿಸಲು ಮಾತುಕತೆ ಮುಂದುವರಿಯಲಿದೆ ಎಂದು ಉಭಯ ದೇಶಗಳೂ ಘೋಷಿಸಿವೆ.