ರಶ್ಯಾದ ಸ್ಪುಟ್ನಿಕ್ ಲಸಿಕೆ ಸಹಿತ ಇನ್ನೂ 5 ಲಸಿಕೆ 6 ತಿಂಗಳೊಳಗೆ ಭಾರತದಲ್ಲಿ ಲಭ್ಯ: ವರದಿ
ಹೊಸದಿಲ್ಲಿ, ಎ.11: ಈ ವರ್ಷದ ಅಕ್ಟೋಬರ್ ಅಂತ್ಯದೊಳಗೆ ಭಾರತಕ್ಕೆ ಇನ್ನೂ 5 ಸಂಸ್ಥೆಗಳ ಕೊರೋನ ಲಸಿಕೆ ಲಭ್ಯವಾಗಲಿದೆ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರತದಲ್ಲಿ ಈಗ ಕೊರೋನ ಸೋಂಕಿನ ವಿರುದ್ಧ ಬಳಸಲು ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎಂಬ ಎರಡು ಲಸಿಕೆ ಉತ್ಪಾದನೆಯಾಗುತ್ತಿದೆ. 2021ರ ಅಕ್ಟೋಬರ್ ಅಂತ್ಯದೊಳಗೆ ಸ್ಪುಟ್ನಿಕ್ ವಿ ಲಸಿಕೆ(ಡಾ ರೆಡ್ಡೀಸ್ ಲ್ಯಾಬೊರೇಟರಿ ಸಹಯೋಗ), ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ(ಬಯೊಲಾಜಿಕಲ್ ಇ ಸಹಯೋಗ), ನೊವಾವ್ಯಾಕ್ಸ್ ಲಸಿಕೆ (ಸೆರಂ ಸಂಸ್ಥೆಯ ಸಹಯೋಗ), ಝೈದಸ್ ಕ್ಯಾಡಿಲಾ ಲಸಿಕೆ ಮತ್ತು ಭಾರತ್ ಬಯೊಟೆಕ್‌ನ ಇಂಟ್ರನಾಸಲ್ ಲಸಿಕೆ ಭಾರತದಲ್ಲಿ ಲಭ್ಯವಾಗಲಿದೆ. ದೇಶದಲ್ಲಿ ಕೊರೋನ ವಿರುದ್ಧದ ಯಾವುದೇ ಲಸಿಕೆಯ ತುರ್ತುಸಂದರ್ಭದ ಬಳಕೆಗೆ ದೃಢೀಕರಣ ನೀಡುವ ಮುನ್ನ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಕೇಂದ್ರ ಸರಕಾರ ಪ್ರಮುಖ ಆದ್ಯತೆ ನೀಡಲಿದೆ ಎಂದು ಮೂಲಗಳು ಹೇಳಿವೆ.
ದೇಶದಲ್ಲಿ ಈಗ ಸುಮಾರು 20 ಲಸಿಕೆಗಳು ವೈದ್ಯಕೀಯ ಪ್ರಯೋಗ ಮತ್ತು ವೈದ್ಯಕೀಯ ಪೂರ್ವ ಪ್ರಯೋಗದ ಹಂತದಲ್ಲಿವೆ. ಇದರಲ್ಲಿ ರಶ್ಯಾದ ಸ್ಪುಟ್ನಿಕ್ ವಿ ಲಸಿಕೆಗೆ ಮುಂದಿನ 10 ದಿನದೊಳಗೆ ಅನುಮೋದನೆ ದೊರಕಲಿದೆ. ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಸಂಬಂಧಿಸಿ ರಶ್ಯಾ ನೇರ ಹೂಡಿಕೆ ನಿಧಿ(ಆರ್‌ಡಿಎಫ್‌ಐ)ಯ ಅಧಿಕಾರಿಗಳು ಹೈದರಾಬಾದ್ ಮೂಲದ ಡಾ ರೆಡ್ಡೀಸ್ ಲ್ಯಾಬೊರೇಟರಿ, ಹಿಟಿರೊ ಬಯೋಫಾರ್ಮ, ಗ್ಲಾಂಡ್ ಫಾರ್ಮ, ಸ್ಟೆಲಿಸ್ ಬಯೊಫಾರ್ಮ ಹಾಗೂ ವಿಚ್ರೊ ಬಯೊಟೆಕ್ ಸಹಿತ ಭಾರತದ ಹಲವು ಔಷಧ ಉತ್ಪಾದನಾ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.
ಜೂನ್ ಒಳಗೆ ಸ್ಪುಟ್ನಿಕ್ ವಿ ಲಸಿಕೆ ಲಭ್ಯವಾಗಲಿದೆ. ಜಾನ್ಸನ್ ಆ್ಯಂಡ್ ಜಾನ್ಸನ್, ಕ್ಯಾಡಿಲಾ ಝೈದುಸ್ ಲಸಿಕೆ ಆಗಸ್ಟ್‌ನೊಳಗೆ, ಸೆರಂನ ನೊವಾಕ್ಸ್ ಲಸಿಕೆ ಸೆಪ್ಟಂಬರ್‌ನಲ್ಲಿ ಮತ್ತು ಭಾರತ್ ಬಯೊಟೆಕ್‌ನ ನಾಸಲ್ ಲಸಿಕೆ ಅಕ್ಟೋಬರ್ ಅಂತ್ಯದೊಳಗೆ ಲಭ್ಯವಾಗಲಿದೆ. ಕೊರೋನ ಸೋಂಕಿನ ವಿರುದ್ಧದ ಲಸಿಕೆಯ ಕೊರತೆಯಿದೆ ಎಂದು ಹಲವು ರಾಜ್ಯಗಳು ಹೇಳಿಕೆ ನೀಡಿರುವ ಸಂದರ್ಭದಲ್ಲೇ ಈ ವರದಿ ಹೊರಬಿದ್ದಿದೆ. ದೇಶದಲ್ಲಿ ಲಸಿಕೆಯ ಉತ್ಪಾದನೆ ಹೆಚ್ಚಿದರೆ ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಶಕ್ತಿ ಮತ್ತು ಉತ್ತೇಜನ ದೊರಕಲಿದೆ ಎಂದು ಮೂಲಗಳು ಹೇಳಿವೆ.







