30ಶೇ. ಕೋವಿಡ್ ಸೋಂಕಿತರಲ್ಲಿ ಸಹಜ ಪ್ರತಿರೋಧ ಶಕ್ತಿ ನಷ್ಟ: ಅಧ್ಯಯನ ವರದಿ
ಹೊಸದಿಲ್ಲಿ, ಎ.11: ಕೋವಿಡ್-19 ರೋಗನಿರೋಧಕ ಶಕ್ತಿ ಕನಿಷ್ಠ 6ರಿಂದ 7 ತಿಂಗಳವರೆಗೆ ಇರುತ್ತದೆ. ಆದರೆ ಸೋಂಕಿತರಲ್ಲಿ 20ಶೇ.ದಿಂದ 30ಶೇ.ದಷ್ಟು ಮಂದಿ 6 ತಿಂಗಳ ಬಳಿಕ ಸಹಜ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಇನ್ಸ್ಟಿಟ್ಯೂಟ್ ಆಫ್ ಜೆನೊಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ(ಐಜಿಐಬಿ) ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.
ರೋಗನಿರೋಧಕ ಶಕ್ತಿಯಿದ್ದರೂ 20ಶೇ.ದಿಂದ 30ಶೇ.ದಷ್ಟು ಮಂದಿಯಲ್ಲಿ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸುವ ಚಟುವಟಿಕೆ ನಷ್ಟವಾಗುತ್ತಿರುವುದು ಈ ಸಂಶೋಧನೆಯಲ್ಲಿ ಸ್ಪಷ್ಟವಾಗಿದ್ದು ಮುಂಬೈಯಂತಹ ಮಹಾನಗರಗಳಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಬೃಹತ್ ರೂಪದಲ್ಲಿ ಕಾಣಿಸಿಕೊಳ್ಳಲು ಕಾರಣವನ್ನು ತಿಳಿಸಿದೆ ಎಂದು ಐಜಿಐಬಿಯ ನಿರ್ದೇಶಕ ಡಾ ಅನುರಾಗ್ ಅಗರ್ವಾಲ್ ಹೇಳಿದ್ದಾರೆ. ದೇಶದಲ್ಲಿ ಈಗ ಕಾಣಿಸಿಕೊಂಡಿರುವ ಕೊರೋನ ಸೋಂಕಿನ ಎರಡನೇ ಅಲೆಯ ಸಮಯದ ಬಗ್ಗೆ ವಿವರಿಸುವ ಜೊತೆಗೆ ಲಸಿಕೆಯ ಮಹತ್ವದ ಬಗ್ಗೆ ಈ ಅಧ್ಯಯನ ವರದಿ ಒತ್ತು ನೀಡಿರುವುದರಿಂದ ವರದಿಗೆ ಮಹತ್ವವಿದೆ.
ದಿಲ್ಲಿ, ಮುಂಬೈಗಳಲ್ಲಿ ಏಕಾಏಕಿ ಸೋಂಕು ಪ್ರಕರಣ ಉಲ್ಬಣಗೊಳ್ಳಲು ಕಾರಣಗಳನ್ನೂ ಈ ಅಧ್ಯಯನದ ಫಲಿತಾಂಶ ವಿವರಿಸಿದೆ. ಜನವರಿಯಲ್ಲಿ ದಿಲ್ಲಿಯ ಜನರಲ್ಲಿ ಸರಾಸರಿ ರೋಗನಿರೋಧಕ ಶಕ್ತಿ 56ಶೇ.ಕ್ಕಿಂತ ಹೆಚ್ಚಿತ್ತು. ದೀಪಾವಳಿ ಬಳಿಕದ ದಿನಗಳಲ್ಲಿ ದಿಲ್ಲಿಯಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಲು ಇದೂ ಒಂದು ಕಾರಣವಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ರೋಗನಿರೋಧಕ ಶಕ್ತಿ ಅಧಿಕವಾಗಿರುವುದು ಪ್ರಸರಣ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವಾಗುತ್ತದೆ ಎಂದು ಐಜಿಐಬಿ ಅಧ್ಯಯನದಲ್ಲಿ ದೃಢಪಟ್ಟಿದೆ. ಕಳೆದ ಸೆಪ್ಟಂಬರ್‌ನಲ್ಲಿ ಸಿಎಸ್‌ಐಆರ್ ಪ್ರಯೋಗಾಲಯಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಸಮೀಕ್ಷೆಗೆ ಒಳಪಟ್ಟವರಲ್ಲಿ ಕೇವಲ 10ಶೇ. ಜನರು ವೈರಸ್‌ನ ವಿರುದ್ಧದ ಪ್ರತಿಕಾಯ(ಆ್ಯಂಟಿಬಾಡಿ)ಗಳನ್ನು ಹೊಂದಿದ್ದರು.
6 ತಿಂಗಳ ಬಳಿಕ ಇದೇ ಜನರ ಪ್ರತಿಕಾಯ ಸಾಮರ್ಥ್ಯದ ಪರೀಕ್ಷೆ ನಡೆಸಿದಾಗ ಇವರಲ್ಲಿ ಸುಮಾರು 20ಶೇ. ಜನರಲ್ಲಿ ಪ್ರತಿಕಾಯಗಳನ್ನು ಹೊಂದಿದ್ದರೂ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸುವ (ವೈರಸ್‌ಗಳನ್ನು ಕೊಲ್ಲುವುದು ಅಥವಾ ರಕ್ತಕಣ ಪ್ರವೇಶಿಸದಂತೆ ತಡೆಯುವುದು) ಚಟುವಟಿಕೆ ನಷ್ಟವಾಗಿರುವುದು ತಿಳಿದು ಬಂದಿದೆ. ಉಳಿದವರಲ್ಲಿಯೂ ಈ ಸಾಮರ್ಥ್ಯ ಇಳಿಕೆಯ ಹಾದಿಯಲ್ಲಿತ್ತು ಎಂದು ಐಜಿಐಬಿಯ ಹಿರಿಯ ವಿಜ್ಞಾನಿ ಡಾ ಶಂತನು ಸೇನ್‌ಗುಪ್ತಾ ಹೇಳಿದ್ದಾರೆ.