ದೇಶದಲ್ಲಿ 1.5 ಲಕ್ಷ ಹೊಸ ಕೋವಿಡ್-19 ಸೋಂಕು ಪತ್ತೆ

ಹೊಸದಿಲ್ಲಿ: ದೇಶದಲ್ಲಿ ರವಿವಾರ 1.5 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಮೊಟ್ಟಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 11 ಲಕ್ಷದ ಗಡಿ ದಾಟಿದೆ.
ದೇಶದಲ್ಲಿ ಕೋವಿಡ್-19 ವಿರುದ್ಧದ ನಿರ್ಣಾಯಕ ಸಮರದ ಅಂಗವಾಗಿ ಲಸಿಕೆ ನೀಡಿಕೆಯನ್ನು ದ್ವಿಗುಣಗೊಳಿಸುವ ಉದ್ದೇಶದ 'ಟೀಕಾ ಉತ್ಸವ್' ಆರಂಭದ ದಿನವೇ ಭಾರತ ಈ ಹೊಸ ಮೈಲುಗಲ್ಲು ತಲುಪಿದೆ.
ದೇಶದಲ್ಲಿ ಈ ಹಿಂದೆ ಗರಿಷ್ಠ ಅಂದರೆ 10,17,754 ಸಕ್ರಿಯ ಪ್ರಕರಣಗಳು 2020ರ ಸೆಪ್ಟೆಂಬರ್ 18ರಂದು ದಾಖಲಾಗಿದ್ದವು. ಇದು 2021ರ ಫೆ. 12ಕ್ಕೆ 1,35,926ಕ್ಕೆ ಇಳಿದಿತ್ತು. ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಕೇರಳ ಹೀಗೆ ಐದು ರಾಜ್ಯಗಳ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯ ಶೇಕಡ 70.82ರಷ್ಟಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಶೇಕಡ 48.57ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ.
ದೇಶಾದ್ಯಂತ 15 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಚ್ಚು ಹೆಚ್ಚು ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ವೈದ್ಯಕೀಯ ಪೂರೈಕೆಯ ಕೊರತೆ ನಿವಾರಿಸಲು ಹಾಗೂ ಜನಸಂಚಾರ ನಿರ್ಬಂಧಗಳನ್ನು ವಿಸ್ತರಿಸಲು ಕ್ರಮ ಕೈಗೊಂಡಿವೆ.
ಏತನ್ಮಧ್ಯೆ ಕೇಂದ್ರ ಸರ್ಕಾರ ವೈರಸ್ ಪ್ರತಿರೋಧದ ಔಷಧಿ ಎನಿಸಿದ ರೆಮ್‌ಡೆಸಿವಿರ್ ರಫ್ತನ್ನು ನಿಷೇಧಿಸಿದ್ದು, ಈಗಾಗಲೇ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ಈ ಔಷಧಿಯ ಕೊರತೆ ಕಾಣಿಸಿಕೊಂಡಿದೆ.
ದೇಶದಲ್ಲಿ ರವಿವಾರ ಒಟ್ಟು ಪ್ರಕರಣಗಳ ಸಂಖ್ಯೆ 1,33,58,805ಕ್ಕೇರಿದ್ದು, ಅ. 18ರ ಬಳಿಕ ಗರಿಷ್ಠ ಸಾವು ಅಂದರೆ 839 ಸಾವು ಸಂಭವಿಸಿದೆ. ದೇಶದಲ್ಲಿ ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,69,275ಕ್ಕೇರಿದೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 11,08,087ಕ್ಕೇರಿದೆ.







