ಕೊರೋನ ವಿಷಯದಲ್ಲಿ ರಾಜಕೀಯ ಮಾಡಬೇಡಿ: ಬಿಜೆಪಿಗೆ ಶಿವಸೇನೆ ತಿರುಗೇಟು
"ಪ.ಬಂಗಾಳ ಚುನಾವಣೆಯ ಬಳಿಕ ಪ್ರಧಾನಿ ದೇಶದ ಬಗ್ಗೆ ಯೋಚಿಸಬಹುದು"

ಮುಂಬೈ: ದೇಶದಲ್ಲಿ ಅತ್ಯಂತ ಹೆಚ್ಚು ಕೊರೋನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿದ್ದು, ಸೋಂಕಿನ ಅಬ್ಬರಕ್ಕೆ ಕಡಿವಾಣ ಹಾಕಲು ಸಿಎಂ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಹೇರಲು ಒಲವು ತೋರಿದ್ದಾರೆ. ಇದಕ್ಕೆ ಪ್ರತಿಪಕ್ಷವಾದ ಬಿಜೆಪಿ ಲಾಕ್ ಡೌನ್ ಬೇಡವೆಂದು ಒತ್ತಡ ಹೇರುತ್ತಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್, ಕೊರೋನ ಯುದ್ಧ ಭಾರತ-ಪಾಕ್ ಯುದ್ಧದಂತೆ ಅಲ್ಲ. ಕೊರೋನ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದ ಜನತೆ ಮತ್ತೆ ಲಾಕ್ ಡೌನ್ ಬೇಡ ಎನ್ನುತ್ತಿದ್ದಾರೆ ಎಂದು ಫಡ್ನವಿಸ್ ವಾದಿಸುತ್ತಿದ್ದಾರೆ. ಹೌದು ನಮಗೂ ಗೊತ್ತಿದೆ ಲಾಕ್‍ಡೌನ್ ಬೇಡವೆಂದು. ಆದರೆ ಜನರ ಜೀವ ಉಳಿಸಲು ಬೇರೆ ಯಾವ ಮಾರ್ಗವಿದೆ. ಪ್ರಕಾಶ್ ಜಾವಡೇಕರ್ ದಿಲ್ಲಿಯಲ್ಲಿ ಕುಳಿತು ನಾವೇನು ಮಾಡಬೇಕೆಂದು ಹೇಳುವುದು ಸರಿಯಲ್ಲ. ಮಹಾರಾಷ್ಟ್ರಕ್ಕೆ ಬಂದು ಪರಿಸ್ಥಿತಿ ನೋಡಬೇಕು ಎಂದು ಕುಟುಕಿದರು.
ಕೇಂದ್ರ ಸರಕಾರದ ವಿರುದ್ದ ಹರಿಹಾಯ್ದ ರಾವತ್. ದೇಶದಲ್ಲಿ ಮತ್ತೆ ಲಾಕ್ ಡೌನ್ ಬೇಕೋ, ಬೇಡವೋ? ಎಂದು ಪ್ರಧಾನಿ ನಿರ್ಧರಿಸುತ್ತಾರೆ. ಆದರೆ, ಪ್ರಧಾನಿ ಅವರು ಪಶ್ಚಿಮಬಂಗಾಳ ಚುನಾವಣೆಯಲ್ಲಿ ವ್ಯಸ್ತರಾಗಿದ್ದಾರೆ. ಚುನಾವಣೆಯ ಕೆಲಸ ಮುಗಿದ ಬಳಿಕ ಅವರು ದೇಶದ ಬಗ್ಗೆ ಯೋಚಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.