ತಂದೆ ಮಾರಾಟ ಮಾಡಿದ್ದ ತಮ್ಮ ಅಚ್ಚುಮೆಚ್ಚಿನ ಜೀಪ್ ಅನ್ನು 24 ವರ್ಷಗಳ ನಂತರ ಮರಳಿ ಮನೆಗೆ ತಂದ ಮಕ್ಕಳು

Photo: onmanorama.com
ತಿರುವನಂತಪುರಂ: ತಮ್ಮ ಅಚ್ಚುಮೆಚ್ಚಿನ ಜೀಪ್ ಅನ್ನು ತಂದೆ 24 ವರ್ಷಗಳ ಹಿಂದೆ ಅನಿವಾರ್ಯ ಕಾರಣಗಳಿಂದ ಮಾರಾಟ ಮಾಡಿದಾಗ ಆ ನಾಲ್ಕು ಸೋದರರಿಗಾದ ನೋವು ಅಷ್ಟಿಷ್ಟಲ್ಲ. ಎರಡು ವರ್ಷಗಳಿಂದ ತಮ್ಮ ಕುಟುಂಬದ ಅವಿಭಾಜ್ಯ ಅಂಗದಂತಿದ್ದ ಆ ಜೀಪನ್ನು ಬೇರೆಯವರಿಗೆ ಮಾರಾಟ ಮಾಡಿದಾಗ ಇನ್ನೂ ವಾಹನ ಚಾಲನಾ ಪರವಾನಗಿ ಹೊಂದುವ ವಯಸ್ಸಾಗದೇ ಇದ್ದ ಆ ನಾಲ್ಕು ಮಂದಿಯೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದರು.
ಈಗ ಅದೇ ಜೀಪ್ ಮತ್ತೆ ಈ ಸೋದರರ ಮನೆ ಬಾಗಿಲಿನಲ್ಲಿ ಬಂದು ನಿಂತಿದೆ ಹಾಗೂ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ತಂದೆ ಜೀಪನ್ನು 1996ರಲ್ಲಿ ಮಾರಾಟ ಮಾಡಿದಂದಿನಿಂದ ಅದನ್ನು ಮತ್ತೆ ಹೇಗಾದರೂ ತಮ್ಮದಾಗಿಸಬೇಕೆಂದು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಇತ್ತೀಚೆಗೆ ಅದೇ ವಾಹನವನ್ನು ಅದರ ಐದನೇ ಆರ್ಸಿ ಮಾಲಕರಿಂದ ಖರೀದಿಸಿ ಅವರು ಮಲಪ್ಪುರಂ ಜಿಲ್ಲೆಯ ಪುಲ್ಪಟ್ಟದಲ್ಲಿರುವ ತಮ್ಮ ಮನೆಗೆ ತಂದಿದ್ದಾರೆ.
ಕುತೂಹಲಕಾರಿ ಕಥೆ:
ಮಲಪ್ಪುರಂನ ಒ ಪಿ ಅಲಿಬಾಪು ಅವರು ಜುಲೈ 13, 1994ರಂದು ಹೊಸ ಜೀಪ್ ಖರೀದಿಸಿ ಅದನ್ನು ತಮ್ಮ ಪತ್ನಿ ಫಾತಿಮಾಕುಟ್ಟಿ ಹೆಸೆರಿನಲ್ಲಿ ನೋಂದಾಯಿಸಿದ್ದರು. ಬಹಳ ಬೇಗನೇ ಈ ಜೀಪ್ ಮನೆಯವರೆಲ್ಲರ ಅಚ್ಚುಮೆಚ್ಚಿನ ವಾಹನವಾಗಿ ಬಿಟ್ಟಿತು. ಆದರೆ ಎರಡು ವರ್ಷಗಳ ನಂತರ ಅನಿವಾರ್ಯವಾಗಿ ಅಲಿಬಾಪು ಅವರು ಅರ್ಧಮನಸ್ಸಿನಿಂದಲೇ ಈ ಜೀಪನ್ನು ಮಾರಾಟ ಮಾಡಿದ್ದರು.
ಆಗ ಅವರ ಪುತ್ರರಾದ ಶಬೀರಾಲಿ, ಶಮೀರ್, ಶಮೀಲ್ ಹಾಗೂ ಶಮೀಝ್ ಅವರು ಬಹಳ ದುಃಖಿತರಾಗಿದ್ದರು. ಕಿರಿಯವರಾದ ಶಬೀರಾಲಿ 3 ವರ್ಷದವರಾಗಿದ್ದರೆ ಹಿರಿಯವರಾದ ಶಮೀಜ್ಗೆ ಆಗ 16 ವರ್ಷ.
ಇಂದು ಶಬೀರಾಲಿ ಸೌದಿಯಲ್ಲಿ ಉದ್ಯಮಿಯಾಗಿದ್ದರೆ, ಶಮೀರ್ ಹಾಗೂ ಶಮೀಲ್ ಆಸ್ಟ್ರೇಲಿಯಾದಲ್ಲಿ ಉದ್ಯಮಿಗಳಾಗಿದಾರೆ. ಶಮೀಝ್ ಮಂಜೇರಿ ಮೆಡಿಕಲ್ ಕಾಲೇಜಿನಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಂದೆ ಜೀಪ್ ಮಾರಾಟ ಮಾಡಿದಂದಿನಿಂದಲೂ ಅವರು ಕೆಎಲ್ 10 ಸಿ 0320 ನೋಂದಣಿ ಸಂಖ್ಯೆಯ ಜೀಪಿಗಾಗಿ ಆವರು ಹುಡುಕಾಟ ನಡೆಸುತ್ತಿದ್ದರು. ಯಾವುದಾದರೂ ಜೀಪ್ ಕಂಡೊಡನೆ ಅವರು ಮೊದಲು ನೋಡುತ್ತಿದ್ದುದು ಅದರ ನಂಬರ್ ಪ್ಲೇಟ್ ಅನ್ನು. ವಾಹನಗಳ ನೋಂದಣಿ ಸಂಖ್ಯೆ ಹಾಗೂ ಮಾಲಕರ ವಿವರಗಳು ಆನ್ಲೈನ್ನಲ್ಲಿ ಲಭ್ಯವಾದ ನಂತರ ಅವರ ಆಸೆ ಗರಿಗೆದರಿತಾದರೂ ನೋಂದಣಿ ಸಂಖ್ಯೆ ಜತೆಗಿದ್ದ ವಿಳಾಸ ಅಸಮರ್ಪಕವಾಗಿ ಅವರಿಗೆ ನಿರಾಸೆಯಾಯಿತು.
ಈತನ್ಮಧ್ಯೆ ಅಲಿಬಾಪು ಹಾಗೂ ಫಾತಿಮಾಕುಟ್ಟಿ ಪಂಚಾಯತ್ ಅಧ್ಯಕ್ಷರಾದರು. ಆದರೂ ಜೀಪ್ ಬಗ್ಗೆ ಎಲ್ಲರಲ್ಲಿಯೂ ಅವರು ವಿಚಾರಿಸುತ್ತಿದ್ದರು.
ಆ ಒಂದು ಫೋನ್ ಕರೆ
ಕೆಲ ತಿಂಗಳುಗಳ ಹಿಂದೆ ಶಬೀರಾಲಿ ರಜೆ ಮೇಲೆ ಮನೆಗೆ ಬಂದಿದ್ದಾಗ ಪಾಲಕ್ಕಾಡ್ ಆರ್ಟಿಒದಲ್ಲಿ ಕೆಲಸ ಮಾಡುವ ಸ್ನೇಹಿತರೊಬ್ಬರು ಕರೆ ಮಾಡಿ ಜೀಪಿನ ಈಗಿನ ಮಾಲಕರ ವಿವರಗಳನ್ನು ನೀಡಿದರು. ಕೂಡಲೇ ಶಬೀರಾಲಿ, ಶಮೀಝ್ ಹಾಗೂ ಇಬ್ಬರು ಸ್ನೇಹಿತರು ಕೊಝಿಕ್ಕೋಡ್ನ ಮುಕ್ಕಂ ಎಂಬಲ್ಲಿರುವ ಜೀಪ್ ಮಾಲಕರ ಮನೆಗೆ ಹೋದರು. ಅಲ್ಲಿ ಜೀಪ್ ಇತ್ತಾದರೂ ಮಾಲಿಕರು ಮಾರಾಟ ಮಾಡಲು ಮನಸ್ಸು ಮಾಡಲಿಲ್ಲ. ಕೊನೆಗೆ ನಾಲ್ಕು ಮಂದಿ ಸೋದರರ ಕಥೆಯನ್ನು ಕೇಳಿ ಜೀಪ್ ಮಾರಾಟಕ್ಕೆ ಒಪ್ಪಿದರು.
ಸೋದರರು ವಾಹನಕ್ಕೆ ಹೊಸ ಬಣ್ಣ ಬಳಿದು ಅದರ ಹೆಡ್ ಲೈಟ್, ಟಯರ್, ಸೀಟುಗಳನ್ನೂ ಬದಲಾಯಿಸಿದರು. ಮಲಪ್ಪುರಂ ಆರ್ಟಿಒ ಕಚೇರಿಯಲ್ಲಿ ರಿಜಿಸ್ಟ್ರೇಶನ್ ನವೀಕರಣವೂ ಆಗಿ ಈಗ ಮಲಪ್ಪುರಂನ ಅವರ ಮನೆಯ ಅಂಗಣದಲ್ಲಿ ಜೀಪ್ ನಿಂತಿದೆ. ತಂದೆ ಮಾಡಿದಂತೆಯೇ ಸೋದರರು ಈ ಜೀಪನ್ನು ತಮ್ಮ ತಾಯಿಯ ಹೆಸರಿನಲ್ಲಿಯೇ ನೋಂದಣಿ ಮಾಡಿದ್ದಾರೆ ಹಾಗೂ ಮತ್ತೆ ಅದನ್ನು ಯಾವತ್ತೂ ಮಾರಾಟ ಮಾಡದೇ ಇರಲು ನಿರ್ಧರಿಸಿದ್ದಾರೆ.
ಕೃಪೆ: onmanorama.com