ಕೊರೋನ 2ನೆ ಅಲೆ; ಹೆಚ್ಚು ಜನ ಸೇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ: ಉಡುಪಿ ಡಿಸಿ ಮನವಿ

ಉಡುಪಿ, ಎ.12: ಕರೋನ ಎರಡನೇ ಅಲೆ ಇತರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ತುಂಬಾ ವೇಗವಾಗಿ ಹರಡುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆ ದರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಎಲ್ಲ ತಯಾರಿಯನ್ನು ಮಾಡಲಾಗುತ್ತಿದೆ. ಈಗಲೂ ನಮ್ಮ ಜಿಲ್ಲೆಯ ಪರಿಸ್ಥಿತಿ ಕೈಮೀರಿಲ್ಲ. ಆದರಿಂದ ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸಾರ್ವನಿಕರಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ ಅತ್ಯಂತ ಜಾಗೃತೆಯಿಂದ ಮಾಸ್ಕ್ ಹಾಕಿ, ಸ್ಯಾನಿಟೈಸರ್ ಬಳಸಿ, ಸುರಕ್ಷಿತ ಅಂತರ ಕಾಪಾಡಬೇಕು. ಈಗ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಬೇಡಿ. ಆಯೋಜಿಸಿದರೂ ಅಂತ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವುದು ಉತ್ತಮ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿರುವ ಹಿರಿಯರಿಗೆ ಲಸಿಕೆ ಹಾಕಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು. ಹಿರಿಯರಿಗೆ ಲಸಿಕೆ ಹಾಕುವಲ್ಲಿ ನಮ್ಮ ಜಿಲ್ಲೆಯ ಬಹಳ ಮಂದಿ ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಕೊಂಡರೆ ಸಾಕಷ್ಟು ಕರೋನ ಆತಂಕ ಕಡಿಮೆ ಆಗುತ್ತದೆ. ಮೊದಲ ಅಲೆಯಲ್ಲಿ ನಾವು 192 ಮಂದಿಯನ್ನು ಕಳೆದುಕೊಂಡಿದ್ದೇವೆ. ಈ ಅಲೆಯಲ್ಲಿ ನಮ್ಮ ಹಿರಿಯರನ್ನು ಕಳೆದುಕೊಳ್ಳಬಾರದು ಎಂಬುದು ನಮ್ಮ ಆಶಯ. ಹಿರಿಯರ ರಕ್ಷಣೆ ನಮ್ಮಲ್ಲೆರ ಹೊಣೆಯಾಗಿದೆ. ಅವರಿಗೆ ಲಸಿಕೆ ಹಾಕುವ ಕೆಲಸನ್ನು ಮಾಡಿ ಎಂದು ಅವರು ವಿನಂತಿಸಿಕೊಂಡರು.







