ಆನ್‌ಲೈನ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ: ಡಿಸಿಎಂ ಅಶ್ವತ್ಥನಾರಾಯಣ ಸ್ಪಷ್ಟನೆ

ಬೆಂಗಳೂರು, ಎ.12: ಮುಂದಿನ ಶೈಕ್ಷಣಿಕ ವರ್ಷ (2021-22)ದಲ್ಲಿ ಮೊದಲು ಆನ್‌ಲೈನ್ ತರಗತಿಗಳನ್ನು ಆರಂಭ ಮಾಡಲಾಗುವುದು. ಆದರೆ, ಆನ್‌ಲೈನ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಕೋವಿಡ್ ಹಿನ್ನಲೆಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಆನ್‌ಲೈನ್ ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿ-ಪೋಷಕರು ಬೇಡಿಕೆ ಇಡುತ್ತಿದ್ದಾರೆ. ನಮ್ಮ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಪರೀಕ್ಷೆ ಏನಿದ್ದರೂ ಆಫ್ ಲೈನ್ ನಲ್ಲಿ ನಡೆಯುತ್ತದೆ. ಕೆಲ ಡೀಮ್ಡ್ ವಿಶ್ವವಿದ್ಯಾಲಯಗಳು ಆನ್‌ಲೈನ್ ಪರೀಕ್ಷೆ ಮಾಡಿಕೊಳ್ಳುತ್ತಿವೆ. ನಮ್ಮಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ” ಎಂದರು.
ಸದ್ಯಕ್ಕೆ ಬಸ್ ಮುಷ್ಕರದಿಂದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಎಂಜಿನಿಯರಿಂಗ್ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಕೊಂಚ ವ್ಯತ್ಯಯವಾಗಿದೆ. ಮುಷ್ಕರ ನಿಂತ ಕೂಡಲೇ ಪರೀಕ್ಷೆಗಳು ಶುರುವಾಗುತ್ತವೆ ಎಂದರು.
ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಆಫ್ ಲೈನ್ ತರಗತಿಗಳನ್ನೂ ಆರಂಭ ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆಫ್ ಲೈನ್ ಅಥವಾ ಆನ್‌ಲೈನ್ ಕ್ಲಾಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹದು. ಆದರೆ, ಎರಡರಲ್ಲಿ ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯ ಎಂದು ಡಿಸಿಎಂ ಸ್ಪಷ್ಟಪಡಿಸಿದರು.







