ಮಂಗಳೂರು: ಕೆಎಸ್ ರಾವ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ
ಮಂಗಳೂರು, ಎ.12: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆ.ಎಸ್. ರಾವ್ ರೋಡ್‌ನಲ್ಲಿರುವ ಶಾನ್ ಪ್ಲಾಝಾ ಹಾಗೂ ಪ್ರಭಾತ್ ಟಾಕೀಸ್‌ನ ಮಧ್ಯ ಭಾಗದಲ್ಲಿರುವ ಮಳೆ ನೀರು ರಾಜ ಕಾಲುವೆಯ ಸೇತುವೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜೂ.10ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಆ ಹಿನ್ನಲೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಅದರಂತೆ ರಾಷ್ಟ್ರಕವಿ ಎಂ. ಗೋವಿಂದ ಪೈ (ನವಭಾರತ್) ವೃತ್ತದಿಂದ ಕೆ.ಎಸ್. ರಾವ್ ರಸ್ತೆ ಮೂಲಕ ಹಂಪನಕಟ್ಟೆ ಕಡೆಗೆ ಬರುವ ಎಲ್ಲಾ ವಾಹನಗಳನ್ನು ನಿಷೇಧಿಸಲಾಗಿದೆ. ಆದರೆ ನ್ಯಾಯಾಲಯ ಸಂಕೀರ್ಣ, ಸಂತ ಅಲೋಶಿಯಸ್ ಕಾಲೇಜ್, ಎಸ್‌ಡಿಸಿಸಿ ಬ್ಯಾಂಕ್, ಶಾನ್ ಪ್ಲಾಝಾ ಜನತಾ ಡಿಲಕ್ಸ್ ಹೊಟೇಲ್ ಮತ್ತು ಕ್ಲಾಸಿಕ್ ಪ್ಯಾರಾಡೈಸ್ ಅಪಾರ್ಟ್‌ಮೆಂಟ್ ಕಡೆಗೆ ಸಂಚರಿಸುವ ವಾಹನಗಳು ಮಾತ್ರ ಎಂ ಗೋವಿಂದ ಪೈ(ನವಭಾರತ್) ವೃತ್ತ ಮುಖಾಂತರ ಬಿಷಪ್ಸ್ ಹೌಸ್ ಮುಂಭಾಗದಿಂದ ಸಂಚರಿಸಬಹುದು.
ಎಂ ಗೋವಿಂದ ಪೈ (ನವಭಾರತ್) ವೃತ್ತದಿಂದ ಕೆ.ಎಸ್. ರಾವ್ ರಸ್ತೆ ಮುಖಾಂತರ ಹಂಪನಕಟ್ಟೆ-ಮಾರ್ಕೆಟ್-ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾ ತರಹದ ವಾಹನಗಳು ಎಂ. ಗೋವಿಂದ ಪೈ (ನವಭಾರತ್) ವೃತ್ತದಿಂದಾಗಿ ಡೊಂಗರಕೇರಿ ವೆಂಕಟರಮಣ ರಸ್ತೆ- ನ್ಯೂ ಚಿತ್ರ ಟಾಕೀಸ್ ಜಂಕ್ಷನ್ ಮೂಲಕ ಸಂಚರಿಸಬಹುದು. ವಿಟಿ ರಸ್ತೆಯಾಗಿ ಕಾರ್‌ಸ್ಟ್ರೀಟ್ ಮೂಲಕ, ಎಂ.ಜಿ ರಸ್ತೆಯಿಂದ ಪಿವಿಎಸ್ ಜಂಕ್ಷನ್-ಬಂಟ್ಸ್ ಹಾಸ್ಟೆಲ್-ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮುಖಾಂತರ ಸಂಚರಿಸಬಹುದಾಗಿದೆ.
ಎಂ ಗೋವಿಂದ ಪೈ (ನವಭಾರತ್) ವೃತ್ತದಿಂದಾಗಿ ಡೊಂಗರಕೇರಿ ರಸ್ತೆ-ನ್ಯೂ ಚಿತ್ರ ಜಂಕ್ಷನ್‌ವರೆಗಿನ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ವಿಟಿ ರಸ್ತೆಯುದ್ದಕ್ಕೂ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈ ವಾಹನ ಸಂಚಾರ ನಿಷೇಧವು ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದ್ದಾರೆ.







