ಮುರಾರಿ ಸಮುದಾಯದ ಜನರನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಮನವಿ

ಮಂಗಳೂರು, ಎ.12:ಮುರಾರಿ ಸಮುದಾಯದ ಜನರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಈ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಗೆ ಮುರಾರಿ ಸಮುದಾಯದ ಮುಖಂಡರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮನವಿ ಸಲ್ಲಿಸಿದರು.
ಮುರಾರಿ ಜಾತಿಗೆ ಸೇರಿದ ಜನಾಂಗದವರು 4 ತಲೆಮಾರಿನ ಹಿಂದೆ ಕೇರಳದಿಂದ ವಲಸೆ ಬಂದು ಪುತ್ತೂರು ತಾಲೂಕಿನ ಈಶ್ವರ ಮಂಗಲ, ಸುಳ್ಯ, ಕಡಬ ತಾಲೂಕಿನ ನೆಲ್ಯಾಡಿ, ಮಡಿಕೇರಿ ಹಾಗೂ ಮೈಸೂರು ಮತ್ತಿತರ ಕಡೆ ನೆಲೆಸಿದ್ದು, ಸದ್ಯ ಈ ಜನಾಂಗದ ಜನಸಂಖ್ಯೆ 1,500ರಷ್ಟಿದೆ. ಮುರಾರಿ ಸಮುದಾಯದ ಜನರು ಶೈಕ್ಷಣಿಕವಾಗಿ ತೀರಾ ಹಿಂದುಳಿದವರಾಗಿದ್ದು, ಕುಲಕಸುಬಾಗಿ ಮಣ್ಣಿನ ಕುಸುರಿ, ಬುಟ್ಟಿ ಹೆಣೆಯುವುದನ್ನು ಅಳವಡಿಸಿಕೊಂಡಿದ್ದಾರೆ. ಜೀವನ ನಿರ್ವಹಣೆಗಾಗಿ ಹೆಚ್ಚಿನ ಜನರು ಕೂಲಿ ಕೆಲಸ ಮಾಡುತ್ತಿದ್ದಾರೆ. ಈ ಜನಾಂಗದವರ ಮಾತೃ ಭಾಷೆ ಮಲಯಾಳಂ ಆಗಿರುತ್ತದೆ ಎಂದು ಆಯೋಗದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ. ಸುವರ್ಣ, ಪುತ್ತೂರಿನ ವೈದ್ಯ ಪ್ರಸಾದ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.





