ಉಡುಪಿ ಜಿಲ್ಲೆಯಲ್ಲಿ ಮತ್ತೆ ಶತಕದ ಗಡಿ ದಾಟಿದ ಕೊರೋನ ಪಾಸಿಟವ್
ಉಡುಪಿ, ಎ.12: ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತೆ ಶತಕದ ಗಡಿ ದಾಟಿದೆ. ಸೋಮವಾರ ಜಿಲ್ಲೆಯಲ್ಲಿ 101 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 82 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಜಿಲ್ಲೆಯಲ್ಲಿ ಕೋವಿಡ್‌ಗೆ ಸಕ್ರಿಯರಾಗಿರುವವರ ಸಂಖ್ಯೆ 390ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 101 ಮಂದಿಯಲ್ಲಿ 62 ಮಂದಿ ಪುರುಷರು ಹಾಗೂ 39 ಮಂದಿ ಮಹಿಳೆಯರು. ಇವರಲ್ಲಿ 63 ಮಂದಿ ಉಡುಪಿ ತಾಲೂಕಿನವರಾದರೆ 22 ಮಂದಿ ಕುಂದಾಪುರ ತಾಲೂಕಿನವರು. 14 ಮಂದಿ ಕಾರ್ಕಳ ತಾಲೂಕಿನವರಿದ್ದು, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿನ ತಲಾ ಒಬ್ಬರು ಜಿಲ್ಲೆಯಲ್ಲಿ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 85 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದ್ದಾರೆ.
ಕೊಲ್ಲೂರಿನಲ್ಲಿ ಮತ್ತೆ 8 ಪಾಸಿಟಿವ್: ಕೊಲ್ಲೂರು ಪದವಿ ಪೂರ್ವ ಕಾಲೇಜು ಹಾಸ್ಟೆಲ್‌ನ 8 ಮಂದಿ ಮಕ್ಕಳು ಇಂದು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಈ ಮೂಲಕ ಹಾಸ್ಟೆಲ್‌ನ 68 ಮಂದಿ ಇದುವರೆಗೆ ಸೋಂಕಿಗೆ ತುತ್ತಾದಂತಾಗಿದೆ. ಅಲ್ಲದೇ ಇಂದು ಹಿರಿಯಡ್ಕ ಪದವಿ ಪೂರ್ವ ಕಾಲೇಜಿನ ಐವರು, ಮಣಿಪಾಲ ಎಂಐಟಿ ಬಫರ್ ರೆನ್‌ನ 10 ಮಂದಿ ಪಾಸಿಟಿವ್ ಬಂದಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ರವಿವಾರ 82 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 25,491 ಕ್ಕೇರಿದೆ. ರವಿವಾರ ಜಿಲ್ಲೆಯ 2049 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 101 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 26,073 ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,47,174 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಯಾರೂ ಕೋವಿಡ್‌ಗೆ ಬಲಿಯಾಗಿಲ್ಲ. ಈವರೆಗೆ ಸತ್ತವರ ಸಂಖ್ಯೆ 192 ಆಗಿದೆ.







