ಜಗತ್ತಿನಾದ್ಯಂತ ದಿನಂಪ್ರತಿ ವರದಿಯಾಗುತ್ತಿರುವ ಕೊರೋನ ಸೋಂಕಿನ 6 ಪ್ರಕರಣಗಳಲ್ಲಿ 1 ಭಾರತದ್ದು!
ಕುಂಭಮೇಳ, ಚುನಾವಣಾ ರ್ಯಾಲಿ ಪರಿಣಾಮ ಲಕ್ನೋ, ಎ. 8: ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ ಜಗತ್ತಿನಲ್ಲೇ ಅತ್ಯಧಿಕ 168,912 ಪ್ರಕರಣಗಳು ದಾಖಲಾಗಿವೆ.
ಕುಂಭಮೇಳದ ಹಿನ್ನೆಲೆಯಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಭಕ್ತರು ಸೇರುತ್ತಿರುವುದರಿಂದ ಕೊರೋನ ಸೋಂಕಿನ ಪ್ರಕರಣಗಳು ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ. ಜಗತ್ತಿನಾದ್ಯಂತ ದಿನಂಪ್ರತಿ ವರದಿಯಾಗುತ್ತಿರುವ ಕೊರೋನ ಸೋಂಕಿನ 6 ಪ್ರಕರಣಗಳಲ್ಲಿ 1 ಪ್ರಕರಣ ಈಗ ಭಾರತದಿಂದ ವರದಿಯಾಗುತ್ತಿದೆ. ಭಾರತದಲ್ಲಿ ಸೋಮವಾರ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1 ಕೋಟಿ 35 ಲಕ್ಷಕ್ಕೆ ಏರಿಕೆಯಾಗಿದ್ದು, ಬ್ರೆಝಿಲ್ ಅನ್ನು ಹಿಂದಿಕ್ಕಿದೆ. ಇದರೊಂದಿಗೆ ಕೊರೋನ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 3 ಕೋಟಿ 12 ಲಕ್ಷಕ್ಕೆ ತಲುಪಿರುವ ಅಮೆರಿಕದ ಬಳಿಕದ ಎರಡನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಕಳೆದ ವರ್ಷ ಲಾಕ್‌ಡೌನ್ ಬಳಿಕ ಆರ್ಥಿಕ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು ಹಾಗೂ ರಾಜಕೀಯ ರ್ಯಾಲಿಗಳಿಗೆ ಅವಕಾಶ ನೀಡಿರುವುದರಿಂದ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಿಂಗಳ ಕಾಲ ನಡೆಯುವ ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಉತ್ತರಾಖಂಡದ ಹರಿದ್ವಾರದ ಗಂಗಾ ನದಿ ದಂಡೆಯಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ಇದರಿಂದ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ. ‘‘ಇಲ್ಲಿ ಸೇರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸುರಕ್ಷಿತ ಅಂತರ ಕಾಯ್ದುಗೊಳ್ಳುವಂತೆ ಪೊಲೀಸರು ಭಕ್ತರಲ್ಲಿ ನಿರಂತರ ಮನವಿ ಮಾಡುತ್ತಿದ್ದಾರೆ’’ ಎಂದು ಪೊಲೀಸ್ ಅಧಿಕಾರಿ ಸಂಜಯ್ ಗುಂಜ್ಯಾಲ್ ಹೇಳಿದ್ದಾರೆ. ಈ ಪ್ರದೇಶ ಪ್ರವೇಶಿಸಲು ಕೋವಿಡ್ ಪರೀಕ್ಷೆಯನ್ನು ಪ್ರಾಧಿಕಾರ ಕಡ್ಡಾಯಗೊಳಿಸಿದೆ. ಆದರೂ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಾಸಪಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ತಿಂಗಳಲ್ಲಿ ನಾಲ್ಕು ದೊಡ್ಡ ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಲು ಪಶ್ಚಿಮಬಂಗಾಳಕ್ಕೆ ತೆರಳಿದ್ದರು. ಈ ರ್ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
‘‘ಕೊರೋನ ಸೋಂಕಿನ 12 ಲಕ್ಷ ಸಕ್ರಿಯ ಪ್ರಕರಣಗಳೊಂದಿಗೆ ಪ್ರತಿದಿನ ಕೊರೋನ ಸೋಂಕಿನ ಪ್ರಕರಣಗಳು 2 ಲಕ್ಷಕ್ಕೆ ತಲುಪುತ್ತಿದೆ. ಇಂಥ ಸಂದರ್ಭ ಚುನಾವಣಾ ರ್ಯಾಲಿ ಹಾಗೂ ಕುಂಭಮೇಳ ನಡೆಸುವುದು ಅಚ್ಚರಿಯ ವಿಚಾರ’’ ಎಂದು ರಾಜಕೀಯ ವಿಮರ್ಶಕ ಶೇಖರ್ ಗುಪ್ತಾ ಟ್ಟಿಟ್ಟರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕಳೆದ ಒಂದು ದಿನದಲ್ಲಿ ಕೊರೋನ ಸೋಂಕಿನಿಂದ 904 ಮಂದಿ ಮೃತಪಟ್ಟಿದ್ದ್ಜಾರೆ. ಇದು ಅಕ್ಟೋಬರ್ 18ರ ಬಳಿಕ ಸಂಭವಿಸಿದ ಅತ್ಯಧಿಕ ಸಂಖ್ಯೆಯ ಸಾವು. ಇದರೊದಿಗೆ ಒಟ್ಟು ಸಾವಿನ ಸಂಖ್ಯೆ 1,70,179ಕ್ಕೆ ಏರಿಕೆಯಾಗಿದೆ.