ನಕ್ಸಲರಿಗೆ ವಿಠಲ ಮಲೆಕುಡಿಯ ನೆರವು ನೀಡಿದ ಆರೋಪ: ಮೇ 5ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
ಮೂರನೆ ಬಾರಿಗೆ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಗೈರು
ಮಂಗಳೂರು, ಎ.12: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ಅವರ ವಿರುದ್ಧ ನಕ್ಸಲರಿಗೆ ನೆರವಾದ ಆರೋಪ ಹೊರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆಗೆ ಹಾಜರಾಗಬೇಕಿದ್ದ ಅಂದಿನ ಪುತ್ತೂರು ಎಎಸ್ಪಿಎಂಎನ್ ಅನುಚೇತನ್ ಮತ್ತು ಅಂದಿನ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಭಾಸ್ಕರ ರೈ ಅವರು ಮತ್ತೆ ಗೈರುಹಾಜರಾಗಿದ್ದಾರೆ. ಹಾಗಾಗಿ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿದ್ದಾರೆ.
ಮಾ.1ರಂದು ಬೆಳ್ತಂಗಡಿ ಎಸ್ಸೈ ಆಗಿದ್ದ ಉಮೇಶ್ ಉಪ್ಪಳಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ್ದರು. ಆದರೆ ಎಂಎನ್ ಅನುಚೇತನ್ ಮತ್ತು ಭಾಸ್ಕರ ರೈ ಅಂದು ಗೈರುಹಾಜರಾದ ಕಾರಣ ಮಾ.23ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಆವತ್ತೂ ಈ ಇಬ್ಬರು ಅಧಿಕಾರಿಗಳು ಗೈರಾಗಿದ್ದರು ಇದೀಗ ಮೂರನೇ ಬಾರಿಯೂ ಇವರು ಗೈರಾಗಿದ್ದಾರೆ. ಇನ್‌ಸ್ಪೆಕ್ಟರ್ ಭಾಸ್ಕರ ರೈ ಕೊರೋನ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖಾ ತಂಡದಲ್ಲಿರುವ ಅನುಚೇತ್ ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದಾರೆ. ಹಾಗಾಗಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ನಕ್ಸಲರಿಗೆ ನೆರವಾಗಿದ್ದಾರೆ ಎಂದು ಆರೋಪ ಹೊರಿಸಿ 2012ರ ಮಾರ್ಚ್ 3ರಂದು ಪ್ರಕರಣ ದಾಖಲಿಸಲಾಗಿತ್ತು. ಈಗಾಗಲೇ ಈಗಾಗಲೇ 45 ಸಾಕ್ಷಿಗಳ ವಿಚಾರಣೆ ನಡೆದಿದೆ ಎಂದು ನ್ಯಾಯವಾದಿ ದಿನೇಶ್ ಉಳೇಪ್ಪಾಡಿ ತಿಳಿಸಿದ್ದಾರೆ.





