ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ನಿಕ್ಕಿ ಗಲ್ರಾನಿ: ಓರ್ವನ ವಿರುದ್ಧ ಎಫ್ಐಆರ್
Photo: facebook/nikki.galrani
ಬೆಂಗಳೂರು, ಎ.12: ಹೂಡಿಕೆ ಮಾಡಿಕೊಂಡು ಲಾಭದ ಹಣ ಮತ್ತು ಅಸಲಿನ ಹಣ ನೀಡದೆ 50 ಲಕ್ಷ ರೂ. ವಂಚನೆ ಮಾಡಿರುವುದಾಗಿ ಆರೋಪಿಸಿ ಸಿನೆಮಾ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ್ವಯ ಓರ್ವನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ನಿಖಿಲ್ ಹೆಗ್ಡೆ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇಲ್ಲಿನ ಕೋರಮಂಗಲದಲ್ಲಿ ಸ್ಮಾಲಿಸ್ ರೆಸ್ಟೊ ಕೆಫೆ ಹೆಸರಿನಲ್ಲಿ ರೆಸ್ಟೋರೆಂಟ್ ನಡೆಸಲು ಆರೋಪಿಯೊಂದಿಗೆ ನಿಕ್ಕಿ ಗಲ್ರಾನಿ ಹಣ ಹೂಡಿದ್ದರು. ಪೋಷಕರ ಸಮ್ಮುಖದಲ್ಲಿ 50 ಲಕ್ಷ ರೂ. ಹೂಡಿಕೆ ಮಾಡಿದರೆ ಹೆಚ್ಚುವರಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ನಿಖಿಲ್ ಭರವಸೆ ನೀಡಿದ್ದ ಎನ್ನಲಾಗಿದೆ.
ಇದರಂತೆ 2016ರ ಡಿಸೆಂಬರ್ ನಲ್ಲಿ ಗಲ್ರಾನಿ 50 ಲಕ್ಷ ರೂ. ಹೂಡಿಕೆ ಮಾಡಿದ್ದರು. 'ಹಣ ಹೂಡಿಕೆ ಮಾಡಿದ ನಂತರ ಪ್ರತಿ ತಿಂಗಳು ಲಾಭವಾಗಿ ಒಂದು ಲಕ್ಷ ಹಣವನ್ನು ಕೊಟ್ಟಿಲ್ಲ. ಹೂಡಿಕೆ ಮಾಡಿದ 50 ಲಕ್ಷ ರೂ. ಕೂಡಾ ಹಿಂದಿರುಗಿಸುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.