ಮದ್ಯ ಸೇವಿಸಿ ಕಿರುಕುಳ ಆರೋಪ: ಪತಿಯನ್ನೆ ಕೊಲೆಗೈದ ಮಹಿಳೆ

ಬೆಂಗಳೂರು, ಎ.12: ಮದ್ಯದ ಅಮಲಿನಲ್ಲಿ ಕಿರುಕುಳ ನೀಡಿದ್ದ ಪತಿಯನ್ನೆ ಮಹಿಳೆ ಕೊಲೆಗೈದಿದ್ದಾಳೆನ್ನಲಾದ ಘಟನೆ ಜಗಜೀವನರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಗಜೀವನರಾಮ ನಗರದ ಒಬಳೇಶ್ ಕಾಲನಿಯ ಆಟೊ ಚಾಲಕ ಮೋಹನ್(41) ಕೊಲೆಯಾದ ಪತಿಯಾಗಿದ್ದು, ಕೃತ್ಯವೆಸಗಿದ ಪದ್ಮಾ ಎಂಬಾಕೆ ಈತನ ಪತ್ನಿಯಾಗಿದ್ದು, ಗುತ್ತಿಗೆ ಆಧಾರದಲ್ಲಿ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿರುವುದಾಗಿ ತಿಳಿದುಬಂದಿದೆ.
ಆಟೊಚಾಲಕನಾಗಿದ್ದ ಮೋಹನ್‍ನನ್ನು 14 ವರ್ಷಗಳ ಹಿಂದೆ ವಿವಾಹವಾಗಿದ್ದ ಪದ್ಮಾಗೆ ಮೂವರು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಮದ್ಯದ ಅಮಲಿನಲ್ಲಿರುತ್ತಿದ್ದ ಮೋಹನ್‍ನನ್ನು ಆರು ತಿಂಗಳ ಹಿಂದಷ್ಟೇ ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ವಾಪಸಾದ ಕೆಲ ದಿನಗಳ ಕಾಲ ಕುಡಿತದಿಂದ ದೂರವಿದ್ದ ಮೋಹನ್, ಚಟ ಬಿಡದೇ ಮತ್ತೆ ಮದ್ಯದ ದಾಸನಾಗಿದ್ದ ಎನ್ನಲಾಗಿದೆ.
ಕುಡಿದು ಬರುವ ಕಾರಣದಿಂದ ಪ್ರತಿದಿನವೂ ದಂಪತಿ ನಡುವೆ ಜಗಳ ನಡೆಯುತ್ತಿದ್ದು ರವಿವಾರ ಸಂಜೆ ಮೂವರು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ ಕೂಡ ಕುಡಿದು ಬಂದ ಮೋಹನ್ ಮತ್ತು ಪತ್ನಿ ನಡುವೆ ಜಗಳ ಉಂಟಾಗಿದೆ. ಈ ವೇಳೆ ಆಕ್ರೋಶಗೊಂಡ ಪದ್ಮಾ ನೂಕಿದ ರಭಸಕ್ಕೆ ಮೋಹನ್ ಕೆಳಗೆ ಬಿದ್ದಿದ್ದಾರೆ. ಕೂಡಲೇ ಆತನ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿದ್ದಾರೆ. ಅಸ್ವಸ್ಥಗೊಂಡ ಕೂಡಲೇ ಆತಂಕಗೊಂಡ ಪದ್ಮಾ ನೆರೆಮನೆಯವರ ಸಹಾಯದೊಂದಿಗೆ ಮೊದಲು ಎರಡು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಗೆ ಕರೆದೊಯ್ದುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೋಹನ್ ಮೃತಪಟ್ಟಿದ್ದರು.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಗಜೀವನರಾಮನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಪದ್ಮಾಳನ್ನು ಬಂಧಿಸಿದ್ದಾರೆ







