ಛತ್ತೀಸ್ಗಢದಲ್ಲಿ ಕೋವಿಡ್ ಸೋಂಕು ಹೆಚ್ಚಳ : ಆಸ್ಪತ್ರೆ ಎದುರು ಶವಗಳ ರಾಶಿ

ಫೋಟೊ : timesofindia
ಭೋಪಾಲ್: ರಾಯಪುರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯ ನೆಲದ ಮೇಲೆ, ಆಸ್ಪತ್ರೆಯ ಹೊರಗೆ ಬಿಸಿಲಲ್ಲಿ ಕೂಡಾ ಕೋವಿಡ್ ಸೋಂಕಿತರ ಶವಗಳ ರಾಶಿ ಕಂಡುಬರುತ್ತಿವೆ. ದೇಶಕ್ಕೆ ಅಪ್ಪಳಿಸಿರುವ ಎರಡನೇ ಕೋವಿಡ್ ಅಲೆ, ದೇಶದಲ್ಲಿನ ಕ್ಷೀಣ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ ಎಂದು ಜನರು ದೂರಿದ್ದಾರೆ.
ಅಸಾಮಾನ್ಯ ಸಂಖ್ಯೆಯ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಡಾ.ಭೀಮರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇಡಲು ಕೂಡಾ ಸ್ಥಳಾವಕಾಶ ಇಲ್ಲದಂತಾಗಿದೆ. ಕೋವಿಡ್ ಶಿಷ್ಟಾಚಾರದ ಪ್ರಕಾರ ಶವಗಳನ್ನು ಅಂತ್ಯಸಂಸ್ಕಾರಕ್ಕೆ ಮುನ್ನ ಶೈತ್ಯಾಗಾರಗಳಲ್ಲಿ ದಾಸ್ತಾನು ಮಾಡಬೇಕು. ಆದರೆ ಸ್ಥಳಾವಕಾಶ ಲಭ್ಯವಿರುವ ಕಡೆಗಳಲ್ಲೆಲ್ಲ ಶವಗಳು ರಾಶಿ ಬಿದ್ದಿರುವ ದೃಶ್ಯವನ್ನು ನೋಡಿದಾಗ ಮೈಜುಮ್ಮೆನಿಸುತ್ತದೆ ಎಂದು ಸ್ಥಳೀಯರು ತಿಳಿಸಿದ್ದು, ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದು, ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುವುದಕ್ಕಿಂತ ವೇಗವಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಶವಾಗಾರಗಳು ಭರ್ತಿಯಾಗಿವೆ ಎಂದು ಹೇಳುತ್ತಾರೆ.
"ಒಂದೇ ಬಾರಿ ಇಷ್ಟೊಂದು ಸಾವು ಸಂಭವಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಸಾಮಾನ್ಯ ಸಾವಿನ ಸಂಖ್ಯೆಗೆ ಸಾಕಾಗುವಷ್ಟು ಶೈತ್ಯಾಗಾರ ವ್ಯವಸ್ಥೆ ಇದೆ. ಆದರೆ ಒಂದೆರಡು ಸಾವುಗಳು ಸಂಭವಿಸುತ್ತಿದ್ದ ಕಡೆಗಳಿಂದ 10-20 ಸಾವುಗಳು ಹೇಗೆ ವರದಿಯಾಗುತ್ತಿವೆ ಎನ್ನುವುದು ಅರ್ಥವಾಗುತ್ತಿಲ್ಲ. ನಾವು 10-20ಕ್ಕೆ ಸಜ್ಜಾದರೆ 50-60 ಮಂದಿ ಸಾಯುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಶವಗಳಿಗೆ ಶೈತ್ಯಾಗಾರಗಳ ವ್ಯವಸ್ಥೆ ಮಾಡುವುದು ಹೇಗೆ? ಸ್ಮಶಾನಗಳು ಕೂಡಾ ಭರ್ತಿಯಾಗಿವೆ" ಎಂದು ರಾಯಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಮೀರಾ ಬಘೇಲ್ ಹೇಳುತ್ತಾರೆ.
ರೋಗಲಕ್ಷಣ ಇಲ್ಲದ ರೋಗಿಗಳ ಆರೋಗ್ಯ ಸ್ಥಿತಿ ಕೂಡಾ ತೀವ್ರವಾಗಿ ಹದಗೆಟ್ಟು ಹೃದಯಾಘಾತದಿಂದ ರೋಗಿಗಳು ಸಾಯುತ್ತಿದ್ದಾರೆ. ಆದ್ದರಿಂದ ಎರಡನೇ ಅಲೆಯ ಹೊಡೆತವನ್ನು ಅಂದಾಜಿಸುವುದು ಸಾಧ್ಯವಾಗುತ್ತಿಲ್ಲ ಎನ್ನುವುದು ಅವರ ಅಭಿಪ್ರಾಯ. ಅಧಿಕೃತ ಮೂಲಗಳ ಪ್ರಕಾರ ರಾಯಪುರ ನಗರದ ಸ್ಮಶಾನದಲ್ಲಿ ದಿನಕ್ಕೆ ಸರಾಸರಿ 55 ಶವಗಳ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಈ ಪೈಕಿ ಬಹುತೇಕ ಕೊರೋನ ವೈರಸ್ ರೋಗಿಗಳು.
ದೇಶದಲ್ಲಿ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕ ಹತ್ತು ರಾಜ್ಯಗಳ ಪೈಕಿ ಛತ್ತೀಸ್ಗಢ ಕೂಡಾ ಒಂದಾಗಿದ್ದು, ರವಿವಾರ 10521 ಪ್ರಕರಣಗಳು ಹಾಗೂ 122 ಸಾವು ವರದಿಯಾಗಿದೆ. ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4899ಕ್ಕೇರಿದೆ.







