ಆರೋಗ್ಯ ಸಚಿವರ ಕ್ಷೇತ್ರದಲ್ಲಿ ಕೋವಿಡ್ ಸ್ಯಾಂಪಲ್ ಸಂಗ್ರಹಿಸುತ್ತಿರುವ ತೋಟಗಾರ!
ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿರುವ ಸಚಿವ

ಸಾಂದರ್ಭಿಕ ಚಿತ್ರ
ಭೋಪಾಲ್: ಕೋವಿಡ್-19 ಸಾಂಕ್ರಾಮಿಕ ರೋಗವು ಮಧ್ಯಪ್ರದೇಶದ ಆರೋಗ್ಯ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ತೋರಿಸುತ್ತಿವೆ. ಈಗಾಗಲೇ ಮಧ್ಯಪ್ರದೇಶದಲ್ಲಿ ದೈನಂದಿನ ಪ್ರಕರಣಗಳು 6,000 ದಾಟಿವೆ. ಸದ್ಯ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆ ಎದುರಾಗಿದ್ದು, ಕೋವಿಡ್ ಸ್ಯಾಂಪಲ್ ಸಂಗ್ರಹಿಸಲು ತೋಟಗಾರನನ್ನು ನಿಯೋಜಿಸಿದ ಘಟನೆ ನಡೆದಿದೆ. ಸಂಚಿ ಸರ್ಕಾರಿ ಆಸ್ಪತ್ರೆಯಲ್ಲಿ ತೋಟಗಾರನೋರ್ವ ಕೋವಿಡ್ ಕ್ಲಿನಿಕಲ್ ಮಾದರಿಗಳನ್ನು ಸಂಗ್ರಹಿಸುತ್ತಿದ್ದರೆ. ಆರೋಗ್ಯ ಸಚಿವರು ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ndtv.com ವರದಿ ಮಾಡಿದೆ.
ಮಧ್ಯಪ್ರದೇಶದಲ್ಲಿ ನಿನ್ನೆ ಮೊದಲ ಬಾರಿಗೆ 6,489 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 4000ಕ್ಕೂ ಹೆಚ್ಚು ಪ್ರಕರಣಗಳು ಸತತ 11 ದಿನಗಳಿಂದ ವರದಿಯಾಗುತ್ತಿವೆ. ಕಳೆದ 11 ದಿನಗಳಲ್ಲಿ ಒಟ್ಟು 46,577 ನೂತನ ಸೋಂಕುಗಳು ಪತ್ತೆಯಾಗಿವೆ.
ಆಸ್ಪತ್ರೆಯ ಗೇಟ್ ಗಳಲ್ಲಿ ಹಲವಾರು ಮಂದಿ ಮೃತಪಡುತ್ತಿರುವ ದೃಶ್ಯಗಳು ಇಂಧೋರ್ ನಂತಹ ಸ್ಥಳಗಳಿಂದ ದಾಖಲಾಗುತ್ತಿದ್ದು, ಹಲವಾರು ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವರದಿಯಾಗುತ್ತಿವೆ.
"ನಾನು ಈ ಆಸ್ಪತ್ರೆಯ ಖಾಯಂ ಉದ್ಯೋಗಿಯೇನಲ್ಲ. ನಾನು ಓರ್ವ ತೋಟಗಾರ. ಆದರೂ ನಾನು ಕೋವಿಡ್ ಮಾದರಿಗಳನ್ನು ಸಂಗ್ರಹಿಸುತ್ತಿದ್ದೇನೆ. ಏಕೆಂದರೆ ಆಸ್ಪತ್ರೆಯಲ್ಲಿ ಉಳಿದವರೆಲ್ಲರೂ ಸೋಂಕಿಗೆ ಒಳಗಾಗಿದ್ದಾರೆ" ಎಂದು ತೋಟಗಾರ ಹಾಲ್ಕೆ ರಾಮ್ ಹೇಳುತ್ತಾರೆ. ತೋಟಗಾರನಿಗೆ ಈ ಕುರಿತು ತರಬೇತಿ ನೀಡಿದ್ದೇವೆ ಎಂದು ಆಸ್ಪತ್ರೆಯ ಉಸ್ತುವಾರಿ ಬ್ಲಾಕ್ ಮೆಡಿಕಲ್ ಆಫೀಸರ್ ರಾಜಶಿರಿ ಟಿಡ್ಕೆ ಹೇಳಿದ್ದಾರೆ.
"ನಮಗೆ ಏನು ಮಾಡಲು ಸಾಧ್ಯ? ಎಲ್ಲ ಸಿಬ್ಬಂದಿಗಳು ಸೋಂಕಿಗೆ ಒಳಗಾಗಿದ್ದಾರೆ. ಆದರೂ ಕೆಲ ಮುಂದುವರಿದಿದೆ. ಆದ್ದರಿಂದ ಪರ್ಯಾಯವಾಗಿ ಮತ್ತು ತುರ್ತು ಕಾರ್ಯಗಳಿಗಾಗಿ ತೋಟಗಾರ ಸೇರಿದಂತೆ ಹಲವರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ನಡುವೆ ಆರೋಗ್ಯ ಸಚಿವರ ಕ್ಷೇತ್ರದಲ್ಲಿ ಇಂತಹಾ ದುರ್ಘಟನೆಗಳು ಸಂಭವಿಸುತ್ತಿದ್ದರೂ ಅವರು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ವ್ಯಸ್ತರಾಗಿರುವುದು ಸಾಮಾಜಿಕ ತಾಣದಾದ್ಯಂತ ಆಕ್ರೋಶ ಹುಟ್ಟುಹಾಕಿದೆ.