ಲೋಕಾಯುಕ್ತ ತನಿಖಾ ವರದಿಯ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ.ಟಿ ಜಲೀಲ್

ತಿರುವನಂತಪುರಂ: ಕೇರಳ ಸರಕಾರದ ಉನ್ನತ ಶಿಕ್ಷಣ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಡಾ. ಕೆ.ಟಿ. ಜಲೀಲ್ ರವರು ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ಪ್ರಮಾಣ ವಚನ ಉಲ್ಲಂಘನೆ ಮಾಡಿದ್ದಾರೆಂದು ಲೋಕಾಯುಕ್ತ ತನಿಖೆಯ ಮೂಲಕ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಕೇರಳ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಹಣಕಾಸು ನಿಗಮದಲ್ಲಿ ಸಚಿವರು ತಮ್ಮ ಸಂಬಂಧಿಯನ್ನು ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು.
ಪ್ರಕರಣದ ಕುರಿತಾದಂತೆ ಲೋಕಾಯುಕ್ತ ತನಿಖೆ ನಡೆಸಿದ ಬಳಿಕ ಕೇರಳ ಸರಕಾರಕ್ಕೆ ವರದಿ ಸಲ್ಲಿಸಲಾಗಿದ್ದು, "ಕೆಟಿ ಜಲೀಲ್ ವಿರುದ್ಧ ಆರೋಪ ದೃಢೀಕರಿಸಿರುವ ಕಾರಣ ಅವರು ಕೇರಳ ಸರ್ಕಾರದ ಸಚಿವರಾಗಿ ಮುಂದುವರಿಯಬಾರದು ಎಂದು ಲೋಕಾಯುಕ್ತ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ವರದಿಯ ಬಳಿಕ ಜಲೀಲ್ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದವು.
ಜಲೀಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, “3 ಕೇಂದ್ರ ಸಂಸ್ಥೆಗಳ ಸಮಗ್ರ ತನಿಖೆಯ ನಂತರವೂ ಅವರು ನನ್ನ ವಿರುದ್ಧ ಏನನ್ನೂ ಕಂಡುಹಿಡಿಯಲಾಗಲಿಲ್ಲ, ಇದು ನನ್ನ ಸಾರ್ವಜನಿಕ ಜೀವನದಲ್ಲಿ ಒಂದು ದೊಡ್ಡ ಸಾಧನೆಯಾಗಿದೆ. ಇದರೊಂದಿಗೆ ಜಲೀಲ್ ಬೇಟೆಯಿಂದ ತಾತ್ಕಾಲಿಕ ಪರಿಹಾರವಾಗಬಹುದೆಂದು ನಾನು ಭಾವಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.







