ವಿದೇಶಗಳಲ್ಲಿ ಬಳಸಲಾಗುತ್ತಿರುವ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸಲಿರುವ ಕೇಂದ್ರ
ದೇಶದಲ್ಲಿ ಲಸಿಕೆಗಳ ಕೊರತೆ ಹಿನ್ನೆಲೆ

ಹೊಸದಿಲ್ಲಿ: ವಿದೇಶಗಳಲ್ಲಿ ತುರ್ತು ಬಳಕೆಗೆ ಅನುಮೋದನೆ ದೊರೆತಿರುವ ಕೋವಿಡ್-19 ಲಸಿಕೆಗಳಿಗೆ ಭಾರತದಲ್ಲಿ ತುರ್ತು ಅನುಮತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
"ದೇಶದಲ್ಲಿ ಬಳಕೆಗೆ ಬಿಡುಗಡೆಗೊಳಿಸುವ ಮೊದಲು ಇಂತಹ ವಿದೇಶಿ ಲಸಿಕೆಗಳ ಸುರಕ್ಷತೆಯನ್ನು ಪರೀಕ್ಷಿಸಲು ಮೊದಲು ಪಡೆಯುವ 100 ಮಂದಿಯ ಮೇಲೆ ಏಳು ದಿನಗಳ ಕಾಲ ನಿಗಾ ಇಡಲಾಗುವುದು" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆ ಸದ್ಯ ದೇಶದಲ್ಲಿ ಬಳಕೆಯಲ್ಲಿರುವ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಮೇಲಿನ ಬೆಳವಣಿಗೆ ನಡೆದಿದೆ.
ಕಡಿಮೆ ಅವಧಿಯಲ್ಲಿ ದೇಶದಲ್ಲಿ ಹೆಚ್ಚು ಜನರಿಗೆ ಲಸಿಕೆ ಒದಗಿಸುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ.
ನೀತಿ ಆಯೋಗ ಸದಸ್ಯ (ಆರೋಗ್ಯ) ಡಾ ವಿ.ಕೆ. ಪೌಲ್ ಅವರ ನೇತೃತ್ವದಲ್ಲಿ ಎಪ್ರಿಲ್ 11ರಂದು ನಡೆದ ಕೋವಿಡ್ ಲಸಿಕೆ ನೀಡಿಕೆ ಸಂಬಂಧ ರಾಷ್ಟ್ರೀಯ ತಜ್ಞರ ತಂಡದ 23ನೇ ಸಭೆಯಲ್ಲೂ ಮೇಲಿನ ವಿಷಯ ಚರ್ಚೆಗೊಂಡಿತ್ತು. ವಿದೇಶಗಳಲ್ಲಿ ಬಳಕೆಯಾಗುತ್ತಿರುವ ಲಸಿಕೆಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಂದರ್ಭಗಳಲ್ಲಿ ಬಳಸಲು ಅನುಮತಿಸಿರುವ ಲಸಿಕೆಗಳಿಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಸಭೆ ಸಲಹೆ ನೀಡಿತ್ತು.







