ಮಾರುಕಟ್ಟೆಗಳಲ್ಲಿ ಜೀವಂತ ಕಾಡು ಪ್ರಾಣಿಗಳ ಮಾರಾಟ ತಡೆ ಹಿಡಿಯುವಂತೆ ದೇಶಗಳನ್ನು ಆಗ್ರಹಿಸಿದ ವಿಶ್ವ ಆರೋಗ್ಯ ಸಂಸ್ಥೆ

Photo: Twitter/SusanR
ಹೊಸದಿಲ್ಲಿ: ಅರಣ್ಯ ಪ್ರದೇಶಗಳಿಂದ ಸೆರೆ ಹಿಡಿಯಲಾದ ಜೀವಂತ ಪ್ರಾಣಿಗಳನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಬೇಕೆಂದು ವಿವಿಧ ದೇಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಆಗ್ರಹಿಸಿದೆಯಲ್ಲದೆ ಇಂತಹ ಪ್ರಾಣಿಗಳೇ ಕೊರೋನ ವೈರಸ್ನಂತಹ ಸಾಂಕ್ರಾಮಿಕಗಳ ಪ್ರಮುಖ ಮೂಲವಾಗಿವೆ ಎಂದು ತಿಳಿಸಿದೆ.
"ಮಾನವರಲ್ಲಿ ಕಂಡು ಬರುವ ಶೇ 70ರಷ್ಟು ಸಾಂಕ್ರಾಮಿಕ ರೋಗಗಳ ಮೂಲ ಪ್ರಾಣಿಗಳು, ಪ್ರಮುಖವಾಗಿ ಕಾಡು ಪ್ರಾಣಿಗಳಾಗಿವೆ, ಹಲವು ರೋಗಗಳು ನೋವೆಲ್ ವೈರಸ್ಗಳಿಂದ ಉಂಟಾಗುತ್ತವೆ. ಕಾಡುಗಳಲ್ಲಿನ ಸಸ್ತನಿಗಳು ಪ್ರಮುಖವಾಗಿ ಹೊಸ ರೋಗಗಳ ಅಪಾಯವೊಡ್ಡುತ್ತವೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸೋಂಕು ಪೀಡಿತ ಪ್ರಾಣಿಯ ದೇಹ ದ್ರವದ ಜತೆ ಮಾನವರ ಸಂಪರ್ಕದಿಂದ ಅವರಿಗೆ ಸೋಂಕು ಹರಡಬಹುದು. ಜಾಗತಿಕವಾಗಿ ಸಾಂಪ್ರದಾಯಿಕ ಮಾರುಕಟ್ಟೆಗಳು ಬಹಳಷ್ಟು ಜನರಿಗೆ ಆಹಾರ ಹಾಗೂ ಜೀವನೋಪಾಯ ಒದಗಿಸುತ್ತವೆ ಆದರೆ ಜೀವಂತ ಕಾಡು ಪ್ರಾಣಿಗಳ ಮಾರಾಟ ನಿಷೇಧಿಸುವುದರಿಂದ ಅಲ್ಲಿ ಕೆಲಸ ಮಾಡುವ ಹಾಗೂ ಖರೀದಿ ಮಾಡುವ ಜನರ ಆರೋಗ್ಯ ರಕ್ಷಿಸಬಹುದು ಎಂದು ಹೇಳಿದ ವಿಶ್ವ ಆರೋಗ್ಯ ಸಂಸ್ಥೆ "ಕೋವಿಡ್-19ನ ಕೆಲ ಆರಂಭಿಕ ಪ್ರಕರಣಗಳಿಗೂ ವುಹಾನ್ ನಗರದಲ್ಲಿನ ಸಾಂಪ್ರದಾಯಿಕ ಆಹಾರ ಮಾರುಕಟ್ಟೆಗೂ ಸಂಬಂಧವಿತ್ತು" ಎಂಬುದನ್ನೂ ಉಲ್ಲೇಖಿಸಿದೆ.