ಶಾಸಕ ಸುನಿಲ್ ನಾಯ್ಕರದ್ದು ಬಾಲಿಷತನದ ಹೇಳಿಕೆ: ಮಾಜಿ ಶಾಸಕ ಜೆ.ಡಿ.ನಾಯ್ಕ

ಭಟ್ಕಳ: ಜಿಲ್ಲೆಯ ಚತುಷ್ಪತ ಹೆದ್ದಾರಿ ಸಮಸ್ಯೆಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರೇ ಕಾರಣ ಎನ್ನುವ ಶಾಸಕ ಸುನಿಲ್ ನಾಯ್ಕ ಅವರ ಹೇಳಿಕೆ ಖಂಡನೀಯ, ಇದೊಂದು ಬಾಲಿಷವಾದ ಹೇಳಿಕೆ ಎಂದು ಮಾಜಿ ಶಾಸಕ ಜೆ.ಡಿ. ನಾಯ್ಕ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯು ಸಂಪೂರ್ಣ ಕೇಂದ್ರ ಸರಕಾರದ ಹಿಡಿತದಲ್ಲಿರುತ್ತದೆ. ಕಾಲ ಕಾಲಕ್ಕೆ ಆ ಪ್ರದೇಶದ ಸಂಸದರು ಜನರೊಂದಿಗೆ ಬೆರೆತು ಜನರಿಗೆ ಅಗತ್ಯವಿರುವೆಡೆಗಳಲ್ಲಿ ಯಾವರೀತಿಯಾಗಬೇಕು ಎಂದು ತಿಳಿದುಕೊಂಡು ಆ ರೀತಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ಶಾಸಕರು ಮಾಜಿ ಸಚಿವ ದೇಶಪಾಂಡೆಯವರ ಮೇಲೆ ದೋಷ ಹೊರಿಸಿರುವುದು ಸರಿಯಲ್ಲ. ಸಾಮಾನ್ಯವಾಗಿ ಉಸ್ತುವಾರಿ ಸಚಿವರಿದ್ದಾಗ ಸಾರ್ವಜನಿಕರು ಅರ್ಜಿ ಕೊಡುತ್ತಾರೆ. ಅದನ್ನು ರಾಜ್ಯಕ್ಕೋ, ಕೇಂದ್ರಕ್ಕೋ ಕಳುಹಿಸುವುದು ಸಾಮಾನ್ಯವಾಗಿದೆ. ಆ ರೀತಿ ಪತ್ರ ಬರೆಯುವುದನ್ನೇ ಪ್ರಶ್ನಿಸಲಾಗದು ಎಂದರು.
ಹೆದ್ದಾರಿಯಂತಹ ರಾಷ್ಟ್ರೀಯ ಯೋಜನೆಗೆ ಜನರು ತಮ್ಮ ಜಾಗಗಳನ್ನು ಸ್ವಯಂ ಇಚ್ಚೆಯಿಂದ ಬಿಟ್ಟು ಕೊಡಬೇಕು. ಅದಕ್ಕೆ ಸರಿಯಾದ ಪರಿಹಾರವನ್ನು ಸಂಬಂಧಪಟ್ಟವರು ನೀಡಬೇಕು. ಆದರೆ ಇಲ್ಲಿ ಐ.ಆರ್.ಬಿ. ಕಂಪೆನಿ ದೊಡ್ಡ ದೊಡ್ಡ ಕಟ್ಟಡಗಳಿದ್ದರೆ ಅಲ್ಲಿ ಕೋಟಿಗಟ್ಟಲೆ ಪರಿಹಾರ ಕೊಡುವುದನ್ನು ತಪ್ಪಿಸಲು ಹೆದ್ದಾರಿ ನಕ್ಷೆಯನ್ನು ಬದಲಿ ಕಡಿಮೆ ಪರಿಹಾರ ಕೊಡುವಂತೆ ಮಾಡಿಕೊಂಡ ಉದಾಹರಣೆ ಬಹಳ ಕಡೆ ಇದೆ. ಅಲ್ಲದೇ ಶಿರಾಲಿ, ಭಟ್ಕಳ ನಗರ, ಹಳದೀಪುರದಂತಹ ಪ್ರದೇಶದಲ್ಲಿ ಹೆದ್ದಾರಿಯನ್ನು ಇನ್ನೂ ಅಗಲೀಕರಣಗೊಳಿಸಿದರೆ ಇಡೀ ನಗರವೇ ಇಲ್ಲವಾಗುವುದು. ಮತ್ತೆ ನಗರ ನಿರ್ಮಾಣಕ್ಕೆ ಹತ್ತಾರು ವರ್ಷಗಳೇ ಬೇಕಾಗಬಹುದು ಎಂದ ಅವರು, ಇಷ್ಟಕ್ಕೂ ಹೆದ್ದಾರಿ ಅಗಲಗೊಳಿಸುವುದು, ಇಲ್ಲವೇ ಕಿರಿದಾಗಿಸುವುದರಿಂದ ದೇಶಪಾಂಡೆಯವರಿಗೇನು ಲಾಭ? ಅವರು ಐ.ಆರ್.ಬಿ. ಕಂಪೆನಿಯ ಶೇರುದಾರರೂ ಅಲ್ಲ, ಪಾಲುದಾರರೂ ಅಲ್ಲ ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಮಾ ಮೊಗೇರ ಅವರು ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆಯವರ ಕುರಿತು ಸುನಿಲ್ ನಾಯ್ಕ ಮಾಡಿದ ಆರೋಪವನ್ನು ವಾಪಾಸು ಪಡೆಯಬೇಕು. ಜಿಲ್ಲೆಯ ಅಭಿವೃದ್ಧಿಗೆ ದೇಶಪಾಂಡೆಯವರ ಕೊಡುಗೆಯನ್ನು ಯಾರೂ ಅಲ್ಲಗಳೆಯಲಾರರು ಎಂದರು.
ಈ ಸಂದರ್ಭದಲ್ಲಿ ಎಫ್. ಕೆ. ಮೊಗೇರ, ವೆಂಕ್ಟಯ್ಯ ಭೈರುಮನೆ, ಮಹೇಶ ನಾಯ್ಕ, ಕರೀಮ್ ಸಾಬ್, ನಾಗೇಶ ದೇವಡಿಗ, ಸಚಿನ್ ನಾಯ್ಕ, ಸುಲೇಮಾನ್ ಕೆ., ಮುಂತಾದವರು ಉಪಸ್ಥಿತರಿದ್ದರು.







