ಮಹಾರಾಷ್ಟ್ರದಲ್ಲಿ ಬುಧವಾರದಿಂದ ಸೆಕ್ಷನ್ 144 ಜಾರಿ, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಣೆ

ಮುಂಬೈ: ಕೊರೋನ ಸೋಂಕಿನ ಸರಪಳಿಯನ್ನು ಮುರಿಯಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದಲ್ಲಿ ಬುಧವಾರದಿಂದ 15 ದಿನಗಳ ಕಾಲ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಮಂಗಳವಾರ ಘೋಷಿಸಿದ್ದಾರೆ.
ಕೊರೋನ ಪ್ರಕರಣಗಳು ಅಪಾಯಕಾರಿಯಾಗಿ ಸ್ಫೋಟಗೊಳ್ಳುತ್ತಿವೆ. ಯುದ್ಧವು ಮತ್ತೆ ಆರಂಭವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.
ಕೋವಿಡ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಬುಧವಾರದಿಂದ ನಾಲ್ಕಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡುವುದನ್ನು ನಿಷೇಧಿಸುವ ಸೆಕ್ಷನ್ 144 ಮಹಾರಾಷ್ಟ್ರದಾದ್ಯಂತ ಜಾರಿಯಲ್ಲಿರುತ್ತದೆ. ಅಗತ್ಯ ಪ್ರಯಾಣಕ್ಕೆ ಮಾತ್ರ ಅವಕಾಶವಿರುತ್ತದೆ. ಬೆಳಗ್ಗೆ 7ರಿಂದ ರಾತ್ರಿ 8ರ ತನಕ ಅಗತ್ಯ ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಠಾಕ್ರೆ ಹೇಳಿದರು.
ಅನಗತ್ಯ ಪ್ರಯಾಣವನ್ನು ನಿಲ್ಲಿಸಬೇಕು. ತುರ್ತುರಹಿತ ಪ್ರಯಾಣವನ್ನು ನಿಲ್ಲಿಸಬೇಕು. ನಾನು ಸಾರ್ವಜನಿಕ ಸಾರಿಗೆ, ರೈಲುಗಳು ಹಾಗೂ ಬಸ್ಸುಗಳನ್ನು ನಿಲ್ಲಿಸುವುದಿಲ್ಲ. ಇದನ್ನು ಅಗತ್ಯ ಪ್ರಯಾಣಕ್ಕಾಗಿ ಮಾತ್ರ ಬಳಸಬೇಕು. ವೈದ್ಯಕೀಯ, ಬ್ಯಾಂಕುಗಳು, ಮಾಧ್ಯಮ ಇ-ಕಾಮರ್ಸ್ ಹಾಗೂ ಇಂಧನ ಇವುಗಳನ್ನು ಅನುಮತಿಸಲಾಗುವುದು. ಈ ವರ್ಷ ಕೊರೋನ ಮುಕ್ತವಾಗಿ ಯುಗಾದಿ ಆಚರಿಸಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, ಕೊರೋನ ಅಪಾಯಕಾರಿಯಾಗಿ ಸ್ಫೋಟಗೊಳ್ಳುತ್ತಿದೆ ಎಂದರು.