ರಸೆಲ್ ದಾಳಿಗೆ ಕುಸಿದ ಮುಂಬೈ ಇಂಡಿಯನ್ಸ್: ಕೆಕೆಆರ್ ಗೆಲುವಿಗೆ 153 ರನ್ ಗುರಿ

Photo: Twitter.com/IPL
ಚೆನ್ನೈ, ಎ.13: ಐಪಿಎಲ್14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೇಗಿ ಆ್ಯಂಡ್ರೆ ರಸೆಲ್ ದಾಳಿಗೆ ಸಿಲುಕಿದ ಮುಂಬೈ ಇಂಡಿಯನ್ಸ್ ಕೇವಲ 152 ರನ್ಗಳಿಗೆ ಆಲೌಟಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಯ ಆರಂಭ ಉತ್ತಮವಾಗಿರಲಿಲ್ಲ. ತಂಡವು 10 ರನ್ ಗಳಿಸುತ್ತಿದ್ದಂತೆಯೇ ಡಿಕಾಕ್ ಔಟ್ ಆಗಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಕೇವಲ 33 ಎಸೆತಗಳಲ್ಲೇ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸಿದರು. 36 ಎಸೆತಗಳನ್ನು ಎದುರಿಸಿದ ಸೂರ್ಯ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ರೋಹಿತ್ ಶರ್ಮಾ 43 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 15, ಪೊಲಾರ್ಡ್ 5 ರನ್ ಗಳಿಸಿದರು. ಕೊನೆಗೆ ಮುಂಬೈ 20 ಓವರ್ ಗಳಲ್ಲಿ 152 ರನ್ಗಳಿಗೆ ಆಲೌಟಾಯಿತು.
ಕೊಲ್ಕತ್ತಾ ಪರ ಆ್ಯಂಡ್ರೆ ರಸೆಲ್ 15 ರನ್ ನೀಡಿ ಐದು ವಿಕೆಟ್ ಪಡೆದರು. ಕಮಿನ್ಸ್ 2 ವಿಕೆಟ್ ಪಡೆದರು.